ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ಹಳೇ ಎಕೆ–47 ಬಂದೂಕುಗಳು ಮಾವೋವಾದಿಗಳ ಕೈಸೇರಿದ್ದು ಹೇಗೆ?

ಸೇನೆಯ
Last Updated 6 ಡಿಸೆಂಬರ್ 2018, 14:16 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಪಡೆ ಯೋಧರು ಬಳಕೆ ಮಾಡಿರುವ ಹಳೇ ಎಕೆ–47 ಬಂದೂಕುಗಳು ಭೂಗತಗುಂಪುಗಳು ಮತ್ತು ಮಾವೋವಾದಿಗಳ ಕೈಸೇರುತ್ತಿವೆ. ಇವುಗಳನ್ನು ರಿಪೇರಿ ಮಾಡಿ ಮಾರುವುದು ಬಿಹಾರದಲ್ಲಿ ಕೆಲವರಿಗೆ ಉದ್ಯೋಗವೇ ಆಗಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ರಿಪೇರಿಯಾದ ಒಂದು ರೈಫಲ್ ಸುಮಾರು ₹7 ಲಕ್ಷಕ್ಕೆ ಮಾರಾಟವಾಗುತ್ತಿದೆ. ಈ ವ್ಯವಹಾರದಲ್ಲಿ ಸಕ್ರಿಯನಾಗಿದ್ದ ಮಾಜಿ ಯೋಧನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಪ್ರಕರಣವನ್ನು ಭೇದಿಸಲಾಗಿದೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿರುವ ರಕ್ಷಣಾ ಇಲಾಖೆಯ ಶಸ್ರ್ತಾಗಾರದಲ್ಲಿ ಹಳೆಯ ರೈಫಲ್‌ಗಳು ಹಾಗೂ ರಿಪೇರಿ ಮಾಡಬಹುದಾದ ಬಂದೂಕಗಳನ್ನು ಶೇಖರಿಸಿಡಲಾಗುತ್ತದೆ.

ಇಂತಹ ಬಂದೂಕುಗಳನ್ನು ಬಿಹಾರದ ಮುಂಗೇರ್‌ಗೆ ಕದ್ದು ತಂದು, ರಿಪೇರಿ ಮಾಡಿ ಸುಸ್ಥಿತಿಗೆ ತರಲಾಗುತ್ತದೆ. ನಂತರ ಗ್ಯಾಂಗ್‌ಸ್ಟರ್‌ಗಳು ಮತ್ತು ಮಾವೋವಾದಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

ಮುಂಗೇರ್‌ನ ಗ್ಯಾಂಗ್‌ಸ್ಟರ್‌ಗಳು ಮತ್ತು ಮಾವೋವಾದಿಗಳಿಗೆ ರಕ್ಷಣಾ ಪಡೆಯ ಬಂದೂಕುಗಳು ಹೇಗೆ ಸಿಕ್ಕವು ಎಂಬುದು ತನಿಖಾಧಿಕಾರಿಗಳನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಜಬಲ್‌ಪುರದಲ್ಲಿ ಶಂಕಿತ ಆರೋಪಿ ಪುರುಷೋತ್ತಮ ರಜಾಕ್‌ನನ್ನು ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಯಿತು. ಮಾಜಿ ಯೋಧ ಪುರುಷೋತ್ತಮ ರಜಾಕ್‌ ಈ ಪ್ರಕರಣದ ಪ್ರಮುಖ ಸೂತ್ರದಾರ. ಕಳೆದ ಆಗಸ್ಟ್‌ ತಿಂಗಳಲ್ಲಿ ಎಕೆ–47 ರೈಫಲ್ಸ್‌ಗಳ ಬಿಡಿ ಭಾಗಗಳನ್ನು ಕದ್ದ ಆರೋಪದಲ್ಲಿ ಸೇನಾ ಅಧಿಕಾರಿಗಳು ಇವನನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ಬಿಡಿ ಭಾಗಗಳು ರಜಾಕ್‌ನ ವಾಹನದಲ್ಲಿ ಪತ್ತೆಯಾಗಿತ್ತು.

ಮೊದಲಿಗೆ ಈ ಪ್ರಕರಣವನ್ನು ಬೇದಿಸಿದ್ದು ಬಿಹಾರ ಪೊಲೀಸರು. ನಂತರ ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾವಣೆ ಮಾಡಿದ್ದರು. ಮುಂಗೇರ್ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟದ ಕೇಂದ್ರವಾಗಿದೆ. ಇಲ್ಲಿ ಎಕೆ–47 ಬಂದೂಕುಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ರಕ್ಷಣಾ ಸಚಿವಾಲಯದ ಶಸ್ತ್ರಾಗಾರಗಳಿಂದ ರೈಫಲ್ಸ್‌ಗಳ ಬಿಡಿ ಭಾಗಗಳನ್ನು ಕದ್ದು ತಂದು ಮುಂಗೇರ್‌ನಲ್ಲಿ ತಯಾರಿಸಲಾಗುತ್ತದೆ. ಈ ಹಿಂದೆ ಮುಂಗೇರ್ ಪೊಲೀಸರು ಇಂತಹದ್ದೇ ಒಂದು ಪ್ರಕರಣವನ್ನು ಬೇದಿಸಿದ್ದರು. ಇದರಲ್ಲಿ ರಕ್ಷಣಾ ಪಡೆ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಸ್ತ್ರಾಸ್ತ್ರ ಮಾರಾಟಗಾರರು ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.

ರಜಾಕ್‌ ಪಶ್ಚಿಮ ಬಂಗಾಳದ ಇಚಾಪೊರ್‌ನಲ್ಲಿರುವ ಶಸ್ತ್ರಾಗಾರದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ಹಳೇ ರೈಫಲ್ಸ್‌ಗಳ ಜೊತೆಗೆ ಹೊಸ ಬಂದೂಕುಗಳ ಬಿಡಿ ಭಾಗಗಳನ್ನು ಕದ್ದು ಸಾಗಣೆ ಮಾಡುತ್ತಿದ್ದ. ಇವನು ನೂರಕ್ಕೂ ಹೆಚ್ಚು ಬಂದೂಕುಗಳು ಮತ್ತು ಬಿಡಿ ಭಾಗಗಳನ್ನು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ. ರಜಾಕ್‌ 2008ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಎಂದು ಈ ಪ್ರಕರಣದ ಬಗ್ಗೆ ತಿಳಿದಿರುವ ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನಾ ಅಧಿಕಾರಿಗಳು ಆಗಸ್ಟ್‌ ತಿಂಗಳಲ್ಲಿ ರಜಾಕ್‌ನನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದು ಯಾಕೆ ಎಂದು ಭಾರತೀಯ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ವಕ್ತಾರರನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು 'ಹಿಂದೂಸ್ತಾನ್‌ ಟೈಮ್ಸ್‌' ಪತ್ರಿಕೆ ವರದಿ ಮಾಡಿದೆ.

ರಜಾಕ್‌ಗೆ ರೈಫಲ್ಸ್‌ಗಳ ಬಳಕೆ, ಅವುಗಳ ಮರು ನಿರ್ಮಾಣ, ರಿಪೇರಿ ಬಗ್ಗೆ ತಿಳಿದಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಮುಂಗೇರ್‌ನ ವಿವಿಧ ಕಡೆಗಳಲ್ಲಿ 24ಕ್ಕೂ ಹೆಚ್ಚು ಎಕೆ–47 ರೈಫಲ್ಸ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಬಿಹಾರ ಪೊಲೀಸ್‌ ಮಹಾ ನಿರ್ದೇಶಕ ಕುಂದನ್‌ ಕೃಷ್ಣ ಹೇಳಿದ್ದಾರ

ರಜಾಖ್‌ 2003ರಿಂದಲೂ ರೈಫಲ್ಸ್‌ಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೋಡಗಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಮುಂಗೇರ್‌ನ ಮಿರ್ಜಾಪುರದ ಬರ್ಧಾ ಗ್ರಾಮದ ನಿವಾಸಿ ಮೊಹಮ್ಮದ್‌ ನಿಯಾಜುರ್‌ ರೆಹಮಾನ್‌ ಜೊತೆ ಸೇರಿ ರಜಾಕ್‌ ರೈಫಲ್ಸ್‌ ಸಾಗಣೆ ಮತ್ತು ಮಾರಾಟ ದಂಧೆ ನಡೆಸುತ್ತಿದ್ದ. ಬಿಹಾರ ಪೊಲೀಸರು ಮೊಹಮ್ಮದ್‌ ನಿಯಾಜುರ್‌ ರೆಹಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ರಜಾಕ್‌ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಜಬಲ್‌ಪುರದಲ್ಲಿ ವಾಸ ಮಾಡುತ್ತಿದ್ದಾನೆ. 2012–2013ರಲ್ಲಿ ಮತ್ತೆ ರೈಫಲ್ಸ್‌ಗಳನ್ನು ಮಾರಾಟ ಮಾಡಲು ಆರಂಭಿಸುತ್ತಾನೆ. 2012ರಲ್ಲಿ ನಿಯಾಜುರ್‌ ರೆಹಮಾನ್‌ಗೆ ಪತ್ರ ಬರೆಯುತ್ತಾನೆ. ಆಗ ನಿಯಾಜುರ್ ರೆಹಮಾನ್‌ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ನಂತರ ಮತ್ತೊಂದು ಪತ್ರ ಬರೆಯುತ್ತಾನೆ. ಈ ವೇಳೆ ನಿಯಾಜುರ್ ಮೃತಪಟ್ಟಿದ್ದು ವ್ಯಾಪಾರ ಮಾಡಲು ತಾನು ಸಿದ್ಧನಿರುವುದಾಗಿ ನಿಯಾಜುರ್ ತಮ್ಮ ಶಂಷೇರ್‌ ರಜಾಕ್‌ಗೆ ಪತ್ರದ ಮೂಲಕ ತಿಳಿಸುತ್ತಾನೆ. ಆಗ ರಜಾಕ್‌ ಶಸ್ತ್ರಗಾರದಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌ ಠಾಕೂರ್‌ ಎಂಬ ಯೋಧನನ್ನು ಸಂಪರ್ಕಿಸಿ ಮತ್ತೆ ರೈಫಲ್ಸ್‌ಗಳ ಮಾರಾಟ ದಂಧೆಗೆ ಇಳಿಯುತ್ತಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಜಾಕ್‌ ಜಬಲ್‌ಪುರದಿಂದ ಬಿಹಾರಕ್ಕೆ ಎಸಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ತನ್ನ ಬ್ಯಾಗಿನಲ್ಲಿ ಮೂರು ಎಕೆ–47 ರೈಫಲ್ಸ್‌ನಗಳನ್ನು ಇಟ್ಟುಕೊಳ್ಳುತ್ತಿದ್ದ. ರಜಾಕ್‌ ಯಾವುದೇ ನಿಲ್ದಾಣಗಳಲ್ಲೂ ಇಳಿಯುತ್ತಿರಲಿಲ್ಲ, ಇವುಗಳನ್ನು ಪಡೆಯುವವರು ರೈಲಿನಲ್ಲಿಯೇ ರಜಾಕ್‌ ಜತೆಗೂಡುತ್ತಿದ್ದರು. ಅವರು ₹ 3.5 ಲಕ್ಷ ನೀಡಿ ರಜಾಕ್‌ ಬಳಿ ಇರುತ್ತಿದ್ದ ಬ್ಯಾಗ್‌ ತೆಗೆದುಕೊಂಡು ಹೋಗುತ್ತಿದ್ದರು. ಇವುಗಳನ್ನು ಪಡೆದವರು ಒಂದು ಲಕ್ಷ ರೂಪಾಯಿ ಲಾಭ ಇಟ್ಟುಕೊಂಡು ಮಾವೋವಾದಿಗಳು ಅಥವಾ ಗ್ಯಾಂಗ್‌ಸ್ಟರ್ಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಎಕೆ–47 ಬಂದೂಕು 5 ರಿಂದ 7 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಖ್ಯಸ್ಥ ವೈ.ಸಿ. ಮೋದಿ ಬಿಹಾರಕ್ಕೆ ಬುಧವಾರ ಭೇಟಿ ನೀಡಿ ಪ್ರಕರಣದ ತನಿಖೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಾವು ನಿರೀಕ್ಷಿಸಿದಂತೆ ಈ ಪ್ರಕರಣ ದೊಡ್ಡದಾಗಿದ್ದು ಇಲ್ಲಿಯವರೆಗೂ 35 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಂಗೇರ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಾಬು ರಾಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT