ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟ್ಯಾನ್‌ ಸ್ವಾಮಿಯದ್ದು ಸಾವಲ್ಲ, ಕೊಲೆ: ವಿರೋಧ ಪಕ್ಷಗಳ ನಾಯಕರ ಆಕ್ರೋಶ, ಟೀಕೆ

ಜಾಮೀನು ನಿರಾಕರಣೆಗೆ ಅಸಮಾಧಾನ
ಫಾಲೋ ಮಾಡಿ
Comments

ಬೆಂಗಳೂರು: ‘ಸ್ಟ್ಯಾನ್‌ ಸ್ವಾಮಿಯದ್ದು ಸಾವಲ್ಲ, ಕೊಲೆ’. ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಸಾವಿನ ಬಗ್ಗೆ ಸಾಮಾಜಿಕ ಹೋರಾಟಗಾರರು, ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರು ಪ್ರತಿಕ್ರಿಯೆ ನೀಡಿರುವ ರೀತಿ ಇದು.

ಸ್ಟ್ಯಾನ್‌ ಸ್ವಾಮಿ ಅವರ ಸಾವಿನ ಸುದ್ದಿ ಬಹಿರಂಗವಾದ ಬೆನ್ನಲ್ಲೇ, ಅದು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಯಿತು. ಟ್ವಿಟರ್‌ನಲ್ಲಿ ಸಂಜೆ 4.30ರ ವೇಳೆಯಲ್ಲಿ #StanSwamy ಹ್ಯಾಷ್‌ಟ್ಯಾಗ್‌ನಲ್ಲಿ ಸಂತಾಪ ಸೂಚನಾ ಟ್ವೀಟ್‌ಗಳು ಬರಲಾರಂಭಿಸಿದವು. ಆದರೆ ಕೆಲವೇ ನಿಮಿಷಗಳಲ್ಲಿ, ‘ಇದು ರಾಜಕೀಯ ಕೊಲೆ’, ‘ವ್ಯವಸ್ಥೆ ಸ್ಟ್ಯಾನ್‌ ಸ್ವಾಮಿ ಅವರನ್ನು ಕೊಂದಿದೆ’, ‘ಬಿಜೆಪಿ ಸ್ಟ್ಯಾನ್‌ ಸ್ವಾಮಿ ಅವರನ್ನು ಕೊಂದಿದೆ’ ಎಂದು ಹಲವರು ಟ್ವೀಟ್ ಮಾಡಿದರು. #StanSwamy ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಸಂಜೆ 5ರ ವೇಳೆಗೆ ಈ ಹ್ಯಾಷ್‌ಟ್ಯಾಗ್ ಮೊದಲ ಸ್ಥಾನದಲ್ಲಿತ್ತು. ನಂತರ ಸತತಐದು ತಾಸು ಈ ಹ್ಯಾಷ್‌ಟ್ಯಾಗ್ ಮೊದಲ ಸ್ಥಾನದಲ್ಲಿತ್ತು.

‘84 ವರ್ಷದ ಅನಾರೋಗ್ಯ ಪೀಡಿತ ವ್ಯಕ್ತಿಗೆ ಜಾಮೀನು ನೀಡುವುದನ್ನು ಎನ್‌ಐಎ ನಿರಾಕರಿಸುವ ಮೂಲಕ ಅವರನ್ನು ಕೊಂದಿದೆ’. ‘ಜಾಮೀನು ನೀಡದೆ ನ್ಯಾಯಾಂಗವು ಸ್ಟ್ಯಾನ್‌ ಸ್ವಾಮಿಯನ್ನು ಕೊಂದಿದೆ’ ಎಂದು ಹಲವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಿಕ್ಷೆಯಾಗಬೇಕಿತ್ತು’
‘ಸ್ಟ್ಯಾನ್‌ ಸ್ವಾಮಿ ಸಹಜವಾಗಿ ಸತ್ತಿದ್ದನ್ನು ಕೇಳಿ ಬೇಸರವಾಗುತ್ತಿದೆ. ದೇಶದ ವಿರುದ್ಧ ಸ್ಟ್ಯಾನ್‌ ಎಸಗಿದ್ದ ಘೋರ ಅಪರಾಧಗಳಿಗಾಗಿ ಆತನಿಗೆ ಶಿಕ್ಷೆಯಾಗಬೇಕಿತ್ತು’ ಎಂದು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಹಲವರು ಬೆಂಬಲಿಸಿದ್ದಾರೆ.

ಉಗ್ರನೊಬ್ಬ ಸತ್ತ ಎಂದು ಕಪಿಲ್ ಮಿಶ್ರಾ ಅವರ ಬೆಂಬಲಿಗರು ಟ್ವೀಟ್ ಮಾಡಿದ್ದಾರೆ. ಸ್ಟಾನ್ ಸ್ವಾಮಿ ಅವರ ಸಾವನ್ನು ಟ್ವಿಟರ್‌ನಲ್ಲಿ ಕೆಲವರು ಸಂಭ್ರಮಿಸಿದ್ದಾರೆ.#StanSwamy ಹ್ಯಾಷ್‌ಟ್ಯಾಗ್‌ನಲ್ಲಿಯೇ ಸಂಭ್ರಮಚಾರಣೆಯ ಟ್ವೀಟ್‌ಗಳನ್ನು ಮಾಡಲಾಗಿದೆ.
-ಕಪಿಲ್ ಮಿಶ್ರಾ ಅವರ ಟ್ವೀಟ್‌ಗೆ ಆಕ್ಷೇಪವೂ ವ್ಯಕ್ತವಾಗಿದೆ.

**

ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಸಾವಿನ ಸುದ್ದಿ ಕೇಳಿ ತೀರಾ ದುಃಖವಾಗಿದೆ. ಎನ್‌ಐಎ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಬಿಜೆಪಿ ಮತ್ತು ನ್ಯಾಯಾಂಗವು ಸ್ಟ್ಯಾನ್‌ ಸ್ವಾಮಿ ಅವರನ್ನು ಕೊಲೆ ಮಾಡಿವೆ.
-ಯೋಗೇಂದ್ರ ಯಾದವ್, ಸ್ವರಾಜ್ ಇಂಡಿಯಾ ಸಂಸ್ಥಾಪಕ

**
ಫಾದರ್ ಸ್ಟ್ಯಾನ್‌ ಸ್ವಾಮಿ ಅವರನ್ನು ಕೊಂದವರು ಯಾರು? ಬುಡಕಟ್ಟು ಜನರ ಅಭಿವೃದ್ಧಿಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿ ಇಟ್ಟಿದ್ದ 84 ವರ್ಷದ ಈ ಸಂತನಿಂದ ಹೆದರಿದ್ದವರು ಯಾರು? ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ನ್ಯಾಯಾಂಗವು ಈ ಅಪರಾಧದಿಂದ ತನ್ನ ಕೈ ತೊಳೆದುಕೊಳ್ಳುತ್ತದೆಯೇ?
-ಥಾಮಸ್ ಐಸಾಕ್, ಸಿಪಿಎಂ ನಾಯಕ

**
ಈ ಸಾವು ಆಘಾತ ನೀಡಿದೆ. ಸ್ಟ್ಯಾನ್‌ ಸ್ವಾಮಿ ಅವರಿಗೆ ಅಗತ್ಯವಿದ್ದ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ನೀಡದೇ ಇದ್ದ ಕಾರಣದಿಂದಲೇ ಅವರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವೇ ಇದಕ್ಕೆ ಹೊಣೆ
-ಹೇಮಂತ್ ಸೊರೇನ್, ಜಾರ್ಖಂಡ್ ಮುಖ್ಯಮಂತ್ರಿ

**
ಸಾಬೀತಾಗದ ಆರೋಪಗಳ ಹೆಸರಿನಲ್ಲಿ, ಯುಎಪಿಎ ಅಡಿ ಅವರನ್ನು ಬಂಧಿಸಲಾಗಿತ್ತು. 2020ರ ಅಕ್ಟೋಬರ್‌ನಿಂದ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು. ಕಸ್ಟಡಿಯಲ್ಲಿನ ಈ ಕೊಲೆಗೆ ಹೊಣೆಗಾರರನ್ನು ಗುರುತಿಸಲೇಬೇಕು
-ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

**
ಸ್ಟ್ಯಾನ್‌ ಸ್ವಾಮಿ ಅವರು ಬದುಕಿದ್ದಾಗ ಅವರ ಘನತೆಯನ್ನು ಕಿತ್ತುಕೊಂಡಿದ್ದ ಈ ನಿರ್ದಯಿ ಸರ್ಕಾರದ ಕೈಗಳಿಗೆ ರಕ್ತ ಅಂಟಿದೆ.ಈ ಸಾವಿನ ಸುದ್ದಿ ಕೇಳಿ ಮನಸ್ಸು ಕದಡಿ ಹೋಗಿದೆ, ಆಘಾತವಾಗಿದೆ ಮತ್ತು ಭಯವಾಗುತ್ತಿದೆ
-ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

**
ಭಯೋತ್ಪಾದನೆಯ ಸುಳ್ಳು ಆಪಾದನೆಯಲ್ಲಿ ಒಂಬತ್ತು ತಿಂಗಳಿನಿಂದ ಬಂಧನದಲ್ಲಿದ್ದ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್‌ ಸ್ವಾಮಿ ಅವರು ಕಸ್ಟಡಿಯಲ್ಲೇ ಮೃತಪಟ್ಟಿದ್ದಾರೆ. ಇದು ಅಕ್ಷಮ್ಯ
-ಮೇರಿ ಲಾವ್ಲೋರ್, ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ವಿಶೇಷ ಪ್ರತಿನಿಧಿ

*
ಸ್ಟ್ಯಾನ್‌ ಸ್ವಾಮಿ ಅವರಿಗೆ ನ್ಯಾಯ ಸಿಗಬೇಕಿತ್ತು, ಅವರನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕಿತ್ತು
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT