ನವದೆಹಲಿ: ‘ಹಿಂಸಾಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ‘ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರವು ಘರ್ಷಣೆಯನ್ನು ಆದಷ್ಟು ಬೇಗ ಶಾಂತಿಯುತವಾಗಿ ಬಗೆಹರಿಸಲು ಮುಂದಾಗಬೇಕು ಎಂದು ಈ ವೇಳೆ ಒತ್ತಾಯಿಸಿದ್ದಾರೆ.
‘ದೆಹಲಿಯಲ್ಲಿ ನೆಲೆಸಿರುವ ಮಣಿಪುರದ ಜನರನ್ನು ಭೇಟಿಯಾಗಿದ್ದೆ; ಮಣಿಪುರದಲ್ಲಿ ಜನಾಂಗೀಯ ಸಂಘರ್ಷದಿಂದ ಎದುರಿಸಿದ ಹೃದಯವಿದ್ರಾವಕ ಘಟನೆಗಳನ್ನು ಹಂಚಿಕೊಂಡರು’ ಎಂದರು.
‘ಸಮುದಾಯಗಳ ನಡುವೆ ಸಂಘರ್ಷ ಉಂಟಾದ ಬಳಿಕ ಅತ್ಯಂತ ಪ್ರೀತಿಪಾತ್ರರು ದೂರವಾಗಿದ್ದು, ದೈಹಿಕ ಹಾಗೂ ಮಾನಸಿಕ ನಷ್ಟ ಅನುಭವಿಸಿದ್ದನ್ನು ಹಂಚಿಕೊಂಡರು’ ಎಂದು ರಾಹುಲ್ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
‘ನಮ್ಮ ಮುಖಗಳನ್ನು ಹೊರಗೆ ತೋರಿಸಿದರೆ ಪ್ರತೀಕಾರಕ್ಕೆ ಅವರು ಮುಂದಾಗಬಹುದು. ಹಾಗಾಗಿ, ನಮ್ಮ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಮುಖಗಳನ್ನು ತೋರಿಸಬೇಡಿ’ ಎಂದು ಅವರು ತಮ್ಮಲ್ಲಿ ಹೇಳಿದ್ದಾರೆ ಎಂದು ಮಣಿಪುರದ ಜನರ ಜೊತೆ ಇರುವ ಫೋಟೊವೊಂದನ್ನು ಹಿಡಿದು ರಾಹುಲ್ ಹೇಳಿದ್ದಾರೆ.