ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಭೂಷಣ್‌ ಜಾಧವ್‌ ಪ್ರಕರಣ: ಐಸಿಜೆಯಲ್ಲಿ ಪಾಕ್‌ಗೆ ಮುಖಭಂಗ

ವಿಚಾರಣೆ ಮುಂದೂಡಲು ನ್ಯಾಯಾಲಯ ನಕಾರ
Last Updated 19 ಫೆಬ್ರುವರಿ 2019, 20:02 IST
ಅಕ್ಷರ ಗಾತ್ರ

ದಿ ಹೇಗ್‌:ಕುಲಭೂಷಣ್‌ ಜಾಧವ್‌ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಪಾಕಿಸ್ತಾನ ಮಾಡಿಕೊಂಡ ಮನವಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಮಂಗಳವಾರ ತಿರಸ್ಕರಿಸಿತು.

ಐಸಿಜೆಯಲ್ಲಿನ ತನ್ನ ಪರ ನ್ಯಾಯಮೂರ್ತಿ ತಸ್ಸಾದುಕ್‌ ಹುಸೇನ್‌ ಜಿಲಾನಿ ಹೃದಯಾಘಾತಕ್ಕೆ ಒಳಗಾಗಿರುವುದರಿಂದ ಅವರ ಸ್ಥಾನಕ್ಕೆ ಮತ್ತೊಬ್ಬ ನ್ಯಾಯಮೂರ್ತಿಯವರನ್ನು ನೇಮಿಸುವವರೆಗೆ ಪ್ರಕರಣ ಮುಂದೂಡುವಂತೆ ಪಾಕಿಸ್ತಾನದ ಅಟಾರ್ನಿ ಜನರಲ್‌ ಅನ್ವರ್‌ ಮನ್ಸೂರ್‌ ಖಾನ್‌ ಮನವಿ ಮಾಡಿಕೊಂಡರು.

‘ನಾವು ನಮಗೆ ನೀಡಲಾದ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಪರವಾದ ನ್ಯಾಯಮೂರ್ತಿ ಒಬ್ಬರು ಇರಲೇಬೇಕು’ ಎಂದು ಅವರು ಹೇಳಿದರು. ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ವಾದ ಮುಂದುವರಿಸುವಂತೆ ಸೂಚಿಸಿತು.

ಜಾಧವ್‌ ಉದ್ಯಮಿ ಅಲ್ಲ:ಭಾರತವು ಸೋಮವಾರ ಮಂಡಿಸಿದ ವಾದಕ್ಕೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನವು, ‘ಕುಲಭೂಷಣ್‌ ಯಾದವ್‌ ಉದ್ಯಮಿಯಾಗಿದ್ದರು ಎಂಬ ಭಾರತದ ವಾದ ಸರಿಯಲ್ಲ. ಅವರು ಗೂಢಚಾರಿ ಆಗಿದ್ದರು’ ಎಂದು ಪುನರುಚ್ಚರಿಸಿತು.

‘ಈ ಮಾತು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಈ ವಿಚಾರಣೆಯುದ್ದಕ್ಕೂ ಭಾರತವು ವಿಶ್ವಾಸದ ಕೊರತೆಯನ್ನು ಪ್ರದರ್ಶಿಸುತ್ತಿದೆ. ಆದರೆ, ಉತ್ತಮ ನಂಬಿಕೆ ಎನ್ನುವುದು ಅಂತರರಾಷ್ಟ್ರೀಯ ಕಾನೂನಿನ ಭಾಗವಾಗಿರುತ್ತದೆ’ ಎಂದು ಪಾಕಿಸ್ತಾನ ಪರ ವಕೀಲ ಖವಾರ್‌ ಖುರೇಶಿ ಹೇಳಿದರು.

**

‘ಅರ್ಜಿ ತಿರಸ್ಕರಿಸಿ’

‘ಐಸಿಜೆಯನ್ನು ಭಾರತವು ರಾಜಕೀಯ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದೆ. ಕುಲಭೂಷಣ್‌ ಜಾಧವ್‌ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂಬ ಭಾರತದ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಪಾಕಿಸ್ತಾನ ಐಸಿಜೆಯಲ್ಲಿ ವಾದ ಮಂಡಿಸಿತು.

ವಾದ ಆಲಿಸಿದ ಐಸಿಜೆ, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿತು. ವಾದ ಮಂಡಿಸಲು ಭಾರತಕ್ಕೆ ಬುಧವಾರ 90 ನಿಮಿಷ ಮತ್ತು ಪಾಕಿಸ್ತಾನಕ್ಕೆ ಗುರುವಾರ 90 ನಿಮಿಷ ಕಾಲಾವಕಾಶ ನೀಡಲಾಗಿದೆ.

**

ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ಭಾರತವು ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳುತ್ತಿದೆ. ಈ ಬಗ್ಗೆ ಮೊದಲು ದಾಖಲೆ ಒದಗಿಸಿ.
–ಇಮ್ರಾನ್‌ ಖಾನ್‌, ಪಾಕಿಸ್ತಾನ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT