ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ನಗರದಾದ್ಯಂತ ಸ್ಫೋಟಕ್ಕೆ ಸಂಚು, ತಯಾರಿಸಲಾಗಿತ್ತು ಐಇಡಿ: ಪೊಲೀಸ್‌ ಕಮಿಷನರ್‌

Last Updated 18 ಫೆಬ್ರುವರಿ 2022, 12:23 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ಇಲ್ಲಿನ ಸೀಮಾಪುರಿ ಪ್ರದೇಶ ಹಾಗೂ ಕಳೆದ ತಿಂಗಳು (ಜ.17) ಗಾಜಿಪುರ ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸುವ ಉದ್ದೇಶದಿಂದ ಸಿದ್ಧಪಡಿಸಲಾಗಿತ್ತು ಎಂದು ದೆಹಲಿಯ ಪೊಲೀಸ್‌ ಕಮಿಷನರ್‌ ರಾಕೇಶ್ ಅಸ್ಥಾನಾ ಹೇಳಿದರು.

ಸ್ಥಳೀಯರ ಸಹಕಾರವಿಲ್ಲದೆ ಅಂಥ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ದೆಹಲಿಯ ಈಶಾನ್ಯ ಭಾಗದ ಸೀಮಾಪುರಿ ಪ್ರದೇಶದಲ್ಲಿ ಐಇಡಿ ಇದ್ದ ಬ್ಯಾಗ್‌ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಭದ್ರತೆ ಹೆಚ್ಚಳ ಮಾಡಿದ್ದು, ಆ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ಸೀಮಾಪುರಿಯ ಮನೆಯಲ್ಲಿ ಪತ್ತೆಯಾಗಿದ್ದ 2.5ರಿಂದ 3 ಕೆಜಿಯಷ್ಟು ತೂಕದ ಐಇಡಿ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಮನೆಯ ಮಾಲೀಕ ಮತ್ತು ಆಸ್ತಿ ವ್ಯವಹಾರ ನಡೆಸುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಶೇಷ ತಂಡವು ಪ್ರಕರಣದ ತನಿಖೆ ಕೈಗೊಂಡಿದ್ದು, ಸ್ಥಳೀಯರು ಹಾಗೂ ವಿದೇಶಿ ಜಾಲದ ಕೈವಾಡ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ ಎಂದು ರಾಕೇಶ್‌ ಅಸ್ಥಾನ ಹೇಳಿದರು.

ಐಇಡಿ ಪತ್ತೆಯಾಗಿದ್ದ ಮನೆಯ ಸಮೀಪದ ಕಟ್ಟಡಗಳಲ್ಲಿ ಇದ್ದ ಸುಮಾರು 400 ಜನರನ್ನು ಸ್ಥಳಾಂತರಿಸಲಾಗಿತ್ತು. ಆ ಮನೆಯನ್ನು ಸೀಲ್‌ ಮಾಡಿ ‌ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ತನಿಖಾ ತಂಡವು ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಕಲೆ ಹಾಕಿದೆ.

ಕಟ್ಟಡದ ಮಾಲೀಕ ಬಾಡಿಗೆಗೆ ಕೊಟ್ಟಿದ್ದ ಮನೆಯಲ್ಲಿ ಐಇಡಿ ತುಂಬಿದ್ದ ಬ್ಯಾಗ್‌ ಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು ಎಂದು ಮನೆಯ ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ.

ಎರಡು ಸ್ಥಳಗಳಲ್ಲಿ ಪತ್ತೆಯಾಗಿರುವ ಸ್ಫೋಟಕಗಳನ್ನು ಸಿದ್ಧಪಡಿಸಿರುವುದು ಒಂದೇ ತಂಡ ಎಂದು ವಿಶ್ಲೇಷಿಸಲಾಗಿದೆ. ಎನ್‌ಎಸ್‌ಜಿ ಮೂಲಗಳ ಪ್ರಕಾರ, ಸ್ಫೋಟಕ ಸಾಧನದಲ್ಲಿ ಅಮೋನಿಯಂ ನೈಟ್ರೇಟ್‌ ಮತ್ತು ಆರ್‌ಡಿಎಕ್ಸ್‌ ಮಿಶ್ರಣವಿತ್ತು ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT