ನವದೆಹಲಿ: ಗೃಹ ಸಚಿವರಾದ ಅಮಿತ್ ಶಾ ಅವರು ಹೇಳಿರುವಂತೆ ಮಣಿಪುರದಲ್ಲಿ ಪರಿಸ್ಥಿತಿ ಶಾಂತವಾಗಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಗೆ ಯಾಕೆ ಭೇಟಿ ನೀಡಿಲ್ಲ ಮತ್ತು ಅಲ್ಲಿನ ರಾಜಕೀಯ ನಾಯಕರ ಜೊತೆ ಮಾತನಾಡಿಲ್ಲ’ ಎಂದು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ.
‘ಮಣಿಪುರದಲ್ಲಿ ಶಾಂತಿ ಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮೈತೇಯಿ ಮತ್ತು ಕುಕಿ ಸಮುದಾಯದೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ವಲಸೆಯನ್ನು ನಿಯಂತ್ರಿಸಲು ಮಯನ್ಮಾರ್ ಗಡಿಯಲ್ಲಿ ಬೇಲಿ ಹಾಕಲಾಗುತ್ತಿದೆ’ ಎಂದು ಅಮಿತ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
‘ಸ್ವಯಂಘೋಷಿತ ಚಾಣಕ್ಯ ಅಮಿತ್ ಶಾ ಹೇಳಿರುವಂತೆ ಮಣಿಪುರದಲ್ಲಿ ಪರಿಸ್ಥಿತಿ ಸಹಜವಾಗಿದ್ದರೆ, ಅಲ್ಲಿನ ಮುಖ್ಯಮಂತ್ರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರೆ. ಸ್ವಯಘೋಷಿತ ಅತಿಮಾನುಷ ವ್ಯಕ್ತಿ ಮೋದಿಯವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯ ಯಾಕೆ ಸಿಕ್ಕಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
‘ಮಣಿಪುರ ಯಾಕೆ ಪೂರ್ಣಕಾಲಿಕ ರಾಜ್ಯಪಾಲರನ್ನು ಹೊಂದಿಲ್ಲ. ಸರ್ಕಾರದ ಮುಖ್ಯಕಾರ್ಯದರ್ಶಿಗಳು 45 ದಿನದಿಂದ ರಾಜ್ಯದಲ್ಲಿ ಯಾಕಿಲ್ಲ. ಹಲವು ಶಾಸಕರು ಮತ್ತು ಸಂಸದರು ಯಾಕೆ ಕೆಲ ದಿನಗಳಿಂದ ರಾಜ್ಯದಲ್ಲಿಲ್ಲ, ಇಂಫಾಲ್‌ನಲ್ಲಿರುವ ಬಿಜೆಪಿ ಕಚೇರಿ ಯಾಕೆ ಕಾರ್ಯಚರಿಸುತ್ತಿಲ್ಲ’ ಎಂದು ಪ್ರಶ್ನೆ ಮಾಡಿದರು.
2023ರ ಮೇ 3ರಂದು ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಪ್ರಧಾನಿ ಮೋದಿಯವರು ಒಮ್ಮೆಯೂ ಅಲ್ಲಿಗೆ ಭೇಟಿ ನೀಡದಿರುವ ಬಗ್ಗೆ ಕಾಂಗ್ರೆಸ್ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್ ಪ್ರಶ್ನೆಗಳು
* ಮಣಿಪುರ ಯಾಕೆ ಪೂರ್ಣಕಾಲಿಕ ರಾಜ್ಯಪಾಲರನ್ನು ಹೊಂದಿಲ್ಲ?
*ಸರ್ಕಾರದ ಮುಖ್ಯಕಾರ್ಯದರ್ಶಿಗಳು 45 ದಿನದಿಂದ ರಾಜ್ಯದಲ್ಲಿ ಯಾಕಿಲ್ಲ?
*ಹಲವು ಶಾಸಕರು ಮತ್ತು ಸಂಸದರು ಯಾಕೆ ಕೆಲ ದಿನಗಳಿಂದ ರಾಜ್ಯದಲ್ಲಿಲ್ಲ?