ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ | ಕೊರೊನಾ ವೈರಸ್‌ ನಿವಾರಣೆಗೆ ಯುವಿಸಿ–ಎಲ್‌ಇಡಿ ತಂತ್ರಜ್ಞಾನ

Last Updated 28 ಏಪ್ರಿಲ್ 2020, 1:26 IST
ಅಕ್ಷರ ಗಾತ್ರ
ADVERTISEMENT
""
""
""
""

ಕೋವಿಡ್‌–19 ರೋಗಕ್ಕೆ ಔಷಧ ಕಂಡುಹಿಡಿಯಲು ಇಡೀ ಜಗತ್ತೇ ಸಮರೋಪಾದಿಯಲ್ಲಿ ಸಂಶೋಧನೆ ಕೈಗೊಳ್ಳುತ್ತಿದೆ. ಕೊರೊನಾ ವೈರಸ್‌ ಮಣಿಸಲು ಜಗತ್ತಿನ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಸ್ಸಾಂನ ಗುವಾಹತಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ಜಿ) ಸಂಶೋಧಕರು ಕೊರೊನಾ ವೈರಸ್‌ ನಿವಾರಿಸುವ ಹೊಸ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲಿದ್ದಾರೆ.

‌‌‌‌ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್‌ ನಿಯಂತ್ರಿಸಲು ಐಐಟಿ–ಜಿ, ಅಲ್ಟ್ರಾವೈಲೆಟ್‌ ಸಿ (ಯುವಿಸಿ) ಎಲ್‌ಇಡಿ ಬೆಳಕಿನ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಡಿಮೆ ವೆಚ್ಚದ ಸೋಂಕು ನಿವಾರಕ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಈ ತಂತ್ರಜ್ಞಾನದ ಮೂಲಕ ಕೇವಲ 30 ಸೆಕೆಂಡ್‌ಗಳಲ್ಲಿ ವೈರಸ್‌ಗಳನ್ನು ನಿವಾರಿಸಲು ಸಾಧ್ಯವಿದೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಬಳಸುವ ವೈಯಕ್ತಿಕ ಸುರಕ್ಷಾ ಸಲಕರಣೆಗಳನ್ನೂ (ಪಿ.ಪಿ.ಇ) ಶುಚಿಗೊಳಿಸಲು ಬಳಸಬಹುದು. ಜೊತೆಗೆ ಕ್ವಾರಂಟೈನ್‌ ಮತ್ತು ಐಸೋಲೇಷನ್‌ ವಾರ್ಡ್‌ಗಳಲ್ಲಿ ಸೋಂಕು ನಿವಾರಿಸಲು ಈ ವಿಧಾನವನ್ನು ಬಳಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಆ್ಯಂಟಿ ಮೈಕ್ರೊಬೈಲ್‌ (ವೈರಾಣು/ ಸೂಕ್ಷ್ಮಜೀವಿ ಪ್ರತಿಬಂಧಕ) ಸ್ಪ್ರೆ ಹಾಗೂ ಹಲವು ಗಂಟೆಗಳ ಕಾಲ ಮಾಸ್ಕ್‌ ಹಾಕಿಕೊಳ್ಳುವ ಆರೋಗ್ಯ ಕಾರ್ಯಕರ್ತರಿಗೆ ಅನುಕೂಲವಾಗುವಂತೆ ಇಯರ್‌ ಗಾರ್ಡ್‌ ಅನ್ನೂ ಸಿದ್ಧಪಡಿಸುವ ಮೂಲಕ ಐಐಟಿ-ಜಿ, ಕೊರೊನಾ ವಿರುದ್ಧದ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ಪಿಪಿಇ ಕಿಟ್‌ನ ಸೋಂಕು ನಿವಾರಣೆಗೆ ಹೊಸ ತಂತ್ರಜ್ಞಾನ, ಜಲನಿರೋಧಕ ಪಿಪಿಇ ತಯಾರಿಕೆಗೆ ನೆರವು

ಐಐಟಿ–ಜಿಯ ನಿರ್ದೇಶಕ ಪ್ರೊ. ಟಿ.ಜಿ. ಸೀತಾರಾಮ್‌ ಅವರು ಅಲ್ಟ್ರಾವೈಲೆಟ್‌ ಸಿ ಎಲ್‌ಇಡಿ ತಂತ್ರಜ್ಞಾನ ಆಧಾರಿತ ಉಪಕರಣ ಸಂಶೋಧನೆ ಮಾಡಲು ಬೆಂಗಳೂರಿನ ಎಂ/ಎಸ್‌ ಎಕ್ಸೆಲ್‌ ಟೆಕ್‌ ಹಾಗೂ ಗುವಾಹತಿಯ ಅಲ್ಟಿಮೇಟ್‌ ಎರೊಅಕ್ವಾ ಫಿಲ್ಟರ್‌ ಲಿಮಿಡೆಟ್‌ ಕಂಪನಿಯ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಐಐಟಿಯ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸೆಂತಿಲ್‌ಮುರುಗನ್‌ ಸುಬ್ಬಯ್ಯ ನೇತೃತ್ವದ ತಂಡವನ್ನು ರಚಿಸಿದ್ದರು.

‘ಐಐಟಿ–ಜಿ ನಿರ್ದೇಶಕ ಪ್ರೊ. ಟಿ.ಜಿ. ಸೀತಾರಾಮ್‌ ನಾಯಕತ್ವದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸಲು ನಮ್ಮ ಸಂಶೋಧನಾ ತಂಡವು ಸರ್ಕಾರಿ ಏಜೆನ್ಸಿಗಳು ಹಾಗೂ ಉದ್ಯಮಗಳ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದ ಸೋಂಕು ನಿವಾರಕ ವಿಧಾನವನ್ನು ಸಂಶೋಧನೆ ಮಾಡಿದೆ’ ಎಂದು ಡಾ. ಸೆಂತಿಲ್‌ಮುರುಗನ್‌ ಸುಬ್ಬಯ್ಯ ಹೆಮ್ಮೆಯಿಂದ ಬೀಗುತ್ತಾರೆ.

‘ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವುದು ಸವಾಲಿನ ಕೆಲಸವಾಗಲಿದೆ. ಸೋಂಕು ನಿವಾರಣೆಗಾಗಿ ಆಲ್ಕೋಹಾಲ್‌ ಅಂಶವಿರುವ ದ್ರಾವಣವನ್ನು ಬಳಸಿ ನೆಲವನ್ನು ಸ್ವಚ್ಛಗೊಳಿಸುವ ಪದ್ಧತಿ ಮಾತ್ರ ನಮ್ಮಲ್ಲಿ ಇದುವರೆಗೂ ಚಾಲ್ತಿಯಲ್ಲಿತ್ತು’ ಎಂದು ಸೇಂತಿಲಮುರುಗನ್‌ ಸುಬ್ಬಯ್ಯ ಹೇಳಿದರು.

ಯುವಿಸಿ ಎಲ್‌ಇಡಿಯಿಂದ ಸೋಂಕು ನಿವಾರಣೆ

ರಂದ್ರಗಳಿಲ್ಲದ ಮೇಲ್ಪದರಗಳ ಮೇಲೆ ಯುವಿಸಿ ಎಲ್‌ಇಡಿ ಬೆಳಕು ಹಾಯಿಸುವ ಮೂಲಕ ವೈರಸ್‌ಗಳನ್ನು ಸಾಯಿಸಲು ಸಾಧ್ಯವಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಯುವಿಸಿಯ 186 ಜೆ ಡೋಸ್‌ನಲ್ಲಿ ಅತ್ಯಂತ ಅಪಾಯಕಾರಿ ವೈರಸ್‌ ಎಂ.ಎಸ್‌–2 ಕಾಲಿಫೇಸ್‌ ಅನ್ನೂ ಶೇ 90ರಷ್ಟು ಕೊಲ್ಲಲು ಸಾಧ್ಯವಿದೆ. ಕೇವಲ 36 ಜೆ ಡೋಸ್‌ನಲ್ಲಿ ಕೋವಿಡ್‌–19 ನಂತಹ ಶೀತಜ್ವರ (ಇನ್‌ಫ್ಲೂಯೆಂಜಾ)ಕ್ಕೆ ಕಾರಣವಾಗುವ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಐಐಟಿ–ಜಿಯ ತಂಡವು ಸಂಶೋಧಿಸಿದ ಯುವಿಸಿ ಎಲ್‌ಇಡಿ ಮಾದರಿಯು ಕೇವಲ 30 ಸೆಕೆಂಡ್‌ಗಳಲ್ಲಿ 400 ಜೆ ಡೋಸ್‌ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಇದು ರಂದ್ರಗಳಿಲ್ಲದ ವಸ್ತುಗಳ ಮೇಲ್ಮೈಯಲ್ಲಿರುವ ವೈರಸ್‌ಗಳನ್ನು ಹೊಡೆದೋಡಿಸಲಿದೆ. ಒಝೋನ್‌ ವ್ಯವಸ್ಥೆಯಲ್ಲಿರುವ ಯುವಿಸಿ ವಿಧಾನವನ್ನು ಬಳಸಿಕೊಂಡು ರಂದ್ರಗಳಿರುವ ಮೇಲ್ಮೈ ಪದರಗಳಲ್ಲಿನ ವೈರಸ್‌ಗಳನ್ನೂ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲೂ ಸಂಶೋಧನೆ ಕೈಗೊಳ್ಳಲಾಗುತ್ತಿದೆ.

ಸೋಂಕು ನಿವಾರಣೆ ಮಾಡುವಾಗ ಈ ಯುವಿಸಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಅಗತ್ಯ ಸುರಕ್ಷತಾ ಕ್ರಮವನ್ನೂ ಕೈಗೊಳ್ಳಲಾಗಿದೆ. ಮನುಷ್ಯನ ಚರ್ಮದ ಮೇಲಾಗುವ ದುಷ್ಪರಿಣಾಮವನ್ನು ತಡೆಯಲು ಈ ಉಪಕರಣವು ಚಲನಶೀಲತೆಯನ್ನು ಗುರುತಿಸುವ ಸೂಕ್ಷ್ಮ ಸಂವೇದನೆಯನ್ನೂ ಹೊಂದಿರುವುದು ವಿಶೇಷವಾಗಿದೆ.

ಸಂಶೋಧನಾ ತಂಡವು ಗೃಹಬಳಕೆಯ ಸ್ವಚ್ಛತಾ ಉಪಕರಣ ಹಾಗೂ ಆಸ್ಪತ್ರೆಯ ವಾರ್ಡ್‌, ಬಸ್‌, ಮೆಟ್ರೊ, ರೈಲು ಬೋಗಿಗಳನ್ನು ಸ್ವಚ್ಛಗೊಳಿಸುವ ಉಪಕರಣಗಳನ್ನು ವಿನ್ಯಾಸಗೊಳಿಸಿದೆ.

ಯುವಿಸಿ ಆಧಾರಿತ ನೆಲ ಒರೆಸುವ ಮೊಪ್‌

ಯುವಿಸಿ ಸೌಲಭ್ಯ ಒಳಗೊಂಡಿರುವ ನೆಲ ಒರೆಸುವ 5,000 ಮೊಪ್‌ಗಳನ್ನು ತಯಾರಿಸಲು ಅಗತ್ಯ ಕಚ್ಚಾ ವಸ್ತುಗಳನ್ನು ಒದಗಿಸಲು ಪಾಲುದಾರಿಕೆ ಉದ್ಯಮವು ಮುಂದೆ ಬಂದಿದ್ದು, ಲಾಕ್‌ಡೌನ್‌ ಅವಧಿಯಲ್ಲೂ ಉತ್ಪಾದಿಸಲು ಅವಕಾಶ ನೀಡುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.

ಐಐಟಿ ಗುವಾಹತಿಯು ಈಗಾಗಲೇ ಈ ತಂತ್ರಜ್ಞಾನಕ್ಕೆ ಹಕ್ಕುಸ್ವಾಮ್ಯ ಪಡೆಯಲು ಅರ್ಜಿ ಸಲ್ಲಿಸಿದೆ. ಮುಕ್ತ ಮಾರುಕಟ್ಟೆಗೆ ಬಿಡುಗಡೆಯಾದಾಗ ₹ 1,000ಕ್ಕೆ ಈ ಉಪಕರಣ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಇದು ಮಾನವಚಾಲಿತ ಉಪಕರಣವಾಗಿದ್ದು, ರೋಬೋಟ್‌ನಿಂದಲೂ ನಿರ್ವಹಣೆ ಮಾಡುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ ಸಂಶೋಧನೆ ಕೈಗೊಳ್ಳಲಾಗುತ್ತಿದೆ.

ಜಲನಿರೊಧಕ ಪಿಪಿಇ ತಯಾರಿಕೆಗೆ ನೆರವು

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಐಸೋಲೇಷನ್‌ ವಾರ್ಡ್‌ಗೆ ತೆರಳುವ ಸಿಬ್ಬಂದಿ ಧರಿಸುವ ವೈಯಕ್ತಿಕ ಸುರಕ್ಷಾ ಸಲಕರಣೆ (ಪಿ.ಪಿ.ಇ) ಉಡುಪು ಜಲನಿರೋಧಕ (ವಾಟರ್‌ಫ್ರೋಫ್‌) ಸಾಮರ್ಥ್ಯವನ್ನು ಹೊಂದಿರಬೇಕು. ಜಲನಿರೋಧಕ ಪಿಪಿಇ ಕಿಟ್‌ ತಯಾರಿಸಲು ಅಗತ್ಯ ತಂತ್ರಜ್ಞಾನವನ್ನೂ ಐಐಟಿ–ಜಿ ನೀಡಲು ಮುಂದೆ ಬಂದಿದೆ. ಇಲ್ಲಿನ ವಿಜ್ಞಾನಿಗಳು ಗುರುತಿಸಿದ ವಸ್ತುವನ್ನು ಬಳಸಿಕೊಂಡು ಪಾಲುದಾರ ಉದ್ಯಮವು ಜಲನಿರೋಧಕ ಪಿಪಿಇ ಕಿಟ್‌ ತಯಾರಿಸಿದ್ದು, ಜಲನಿರೋಧಕ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸುವ ಬಗ್ಗೆ ಪರೀಕ್ಷೆಗೊಳಪಡಿಸುತ್ತಿದೆ.

ಎಂ/ಎಸ್‌ ಎಕ್ಸೆಲ್‌ ಟೆಕ್‌ ಹಾಗೂ ಅಲ್ಟಿಮೇಟ್‌ ಎರೊಅಕ್ವಾ ಫಿಲ್ಟರ್‌ ಪ್ರೈವೇಟ್‌ ಕಂಪನಿಯು ಭಾರತದಲ್ಲಿ ಬೇಡಿಕೆ ಇರುವ 10 ಲಕ್ಷ ಪಿಪಿಇ ಕಿಟ್‌ಗಳನ್ನು ಸಿದ್ಧಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಮೊದಲ ಹಂತದಲ್ಲಿ 15,000 ಪಿಪಿಇ ಕಿಟ್‌ಗಳನ್ನು ಯಶಸ್ವಿಯಾಗಿ ತಯಾರಿಸಲಾಗಿದೆ. ಇವುಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು 200 ಪಿಪಿಇ ಕಿಟ್‌ಗಳನ್ನು ಅಧ್ಯಯನ ಮಾಡಲು ಐಐಟಿ–ಜಿಗೆ ಕಳುಹಿಸಲಾಗುತ್ತಿದೆ. 2,000 ಪಿಪಿಇ ಕಿಟ್‌ಗಳನ್ನು ಈಶಾನ್ಯ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಐಐಟಿ–ಜಿ ನೀಡಿದ ತಂತ್ರಜ್ಞಾನ ಬಳಸಿಕೊಂಡು ಭಾರಿ ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಉತ್ಪಾದಿಸಲು ಈ ಎರಡೂ ಕಂಪನಿಗಳು ಸಜ್ಜಾಗುತ್ತಿವೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಿಪಿಇ ಕಿಟ್‌ಗಳಿಗಿಂತ ಇದು ಹೆಚ್ಚು ಸುರಕ್ಷಿತವಾಗಿದ್ದು, ವೈರಸ್‌ಗಳು ಒಳಸೇರುವುದನ್ನು ಇದು ತಡೆಯಲಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

Caption

ವೈರಸ್‌ ಪ್ರತಿಬಂಧಕ ಸ್ಪ್ರೇಯರ್‌

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರು ಧರಿಸುವ ಪಿಪಿಇ ಕಿಟ್‌ಗಳಿಗೆ ಸಿಂಪರಣೆ ಮಾಡುವ ಆ್ಯಂಟಿ ಮೈಕ್ರೊಬೈಲ್‌ (ವೈರಾಣು/ ಸೂಕ್ಷ್ಮ ಜೀವಿ ಪ್ರತಿಬಂಧಕ) ಸ್ಪ್ರೆ ಅನ್ನು ಐಐಟಿ ಗುವಾಹತಿಯ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಜೀವವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ. ಬಿಮನ್‌ ಬಿ. ಮಂಡಲ್‌ ಹಾಗೂ ಪಿಎಚ್‌ಡಿ ಸಂಶೋಧನಾರ್ಥಿಗಳಾದ ಬಿಬಾಸ್‌ ಕೆ. ಭುನಿಯಾ ಹಾಗೂ ಆಶುತೋಷ್‌ ಬಂಡೋಪಾಧ್ಯಾಯ ಒಳಗೊಂಡ ತಂಡವು ಆ್ಯಂಟಿ ಮೈಕ್ರೊಬೈಲ್‌ ಸ್ಪ್ರೆ ಕಂಡುಹಿಡಿದಿದೆ.

‘ವೈರಸ್‌ನ ಕಣಗಳು ಅಂಟಿಕೊಂಡಿರುವ ಪಿಪಿಇ ಕಿಟ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಹಾಗೂ ಪಿಪಿಇ ಅನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಸೋಂಕು ಬೇರೆಯವರಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರ ಹಾಗೂ ನಾಗರಿಕರ ಸುರಕ್ಷತೆಗಾಗಿ ಕಡಿಮೆ ಬೆಲೆಯ ಆ್ಯಂಟಿ ಮೈಕ್ರೊಬೈಲ್‌ ಸ್ಪ್ರೆ ಅನ್ನು ಸಂಶೋಧಿಸಿದ್ದೇವೆ. ಪಿಪಿಇ ಕಿಟ್‌ ಮೇಲೆ ಈ ದ್ರಾವಣವನ್ನು ಸಿಂಪಡಿಸಿದರೆ ಅಥವಾ ಇದರಲ್ಲಿ ನೆನೆಸಿದರೆ ವೈರಸ್‌ನ ಕಣಗಳು ಸಾಯಲಿವೆ. ಇದರಿಂದ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವುದನ್ನು ತಡೆಯಬಹುದು’ ಎನ್ನುತ್ತಾರೆ ಡಾ. ಬಿಮನ್‌ ಮಂಡನ್‌.

ಈ ದ್ರಾವಣವನ್ನು ಪಿಪಿಇ ಕಿಟ್‌ ಜೊತೆಗೆ ವೈದ್ಯಕೀಯ ಉಪಕರಣಗಳಿಗೂ ಸಿಂಪಡಿಸುವ ಮೂಲಕ ಸೋಂಕು ನಿವಾರಣೆ ಮಾಡಬಹುದು. ಇದನ್ನು ಸಿಂಪಡಿಸುವ ಮೂಲಕ ವೈರಸ್‌ ನಿವಾರಿಸಲು ಸಾಧ್ಯವಿರುವುದರಿಂದ ಪಿಪಿಇ ಕಿಟ್‌ ಮರುಬಳಕೆ ಮಾಡಬಹುದಾಗಿದೆ. ಇದರಿಂದ ಪಿಪಿಇ ಕಿಟ್‌ ಉತ್ಪಾದಿಸುವ ಉದ್ಯಮಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

ಇಯರ್ ಗಾರ್ಡ್

3ಡಿ ಇಯರ್‌ ಗಾರ್ಡ್‌

ದಿನದಲ್ಲಿ ಹಲವು ಗಂಟೆಗಳ ಕಾಲ ಮುಖಕ್ಕೆ ಬಿಗಿಯಾಗಿರುವ ಮಾಸ್ಕ್‌ ಧರಿಸುವುದರಿಂದ ಬಹುತೇಕ ಜನರಿಗೆ ಕಿವಿ ನೋವು ಬರುತ್ತದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಹಲವು ಗಂಟೆಗಳ ಕಾಲ ಇಂತಹ ಮಾಸ್ಕ್‌ ಹಾಕಿಕೊಳ್ಳುವುದು ಅನಿವಾರ್ಯ. ಕೊರೊನಾ ಸೋಂಕಿತ ವಲಯದಲ್ಲಿ ನಾಗರಿಕರೂ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಲೇಬೇಕಾಗುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಐಟಿ–ಜಿಯ ಸಂಶೋಧನಾ ತಂಡವು 3ಡಿ ಪ್ರಿಂಟೆಡ್‌ ಇಯರ್‌ ಗಾರ್ಡ್‌ ಅನ್ನು ಸಿದ್ಧಪಡಿಸಿದೆ.

3ಡಿ ಇಯರ್‌ ಗಾರ್ಡ್‌ ಅನ್ನು ಫ್ರೀ ಸೈಜ್‌ನಲ್ಲಿ ಸಿದ್ಧಪಡಿಸಲಾಗಿದ್ದು, ಅವರವರ ಸೈಜಿಗೆ ತಕ್ಕಂತೆ ಇಯರ್‌ ಸ್ಟ್ರಿಪ್‌ ಅನ್ನು ಗಾರ್ಡ್‌ಗೆ ಸಿಕ್ಕಿಸಿಕೊಳ್ಳಬಹುದಾಗಿದೆ. ಈ ಇಯರ್‌ ಗಾರ್ಡ್‌ ಬಳಸುವುದರಿಂದ ಮಾಸ್ಕ್‌ನ ಸ್ಟ್ರ್ಯಾಪ್‌ನ ಒತ್ತಡ ಕಿವಿಯ ಮೇಲೆ ಬೀಳುವುದಿಲ್ಲ.
ಇದನ್ನು ಐಐಟಿ–ಜಿಯ ಬಯೊಮಟಿರಿಯಲ್‌ ಆ್ಯಂಡ್‌ ಟಿಶ್ಯು ಎಂಜಿನಿಯರಿಂಗ್‌ ಲ್ಯಾಬೊರೆಟರಿಯಲ್ಲಿ ತಯಾರಿಸಲಾಗಿದೆ. ವಿಜ್ಞಾನಿಗಳ ತಂಡವು ಈಶಾನ್ಯ ಆಸ್ಪತ್ರೆಗಳಿಗೆ ವಿತರಿಸಲು ಈಗಾಗಲೇ ಸಾವಿರಾರು ಇಯರ್‌ ಗಾರ್ಡ್‌ಗಳನ್ನು ತಯಾರಿಸಿದೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ವಿನಾಯಕ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT