ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಶಾಲೆ ಅರ್ಧಕ್ಕೆ ಬಿಟ್ಟವರ ಸಂಖ್ಯೆ ಹೆಚ್ಚು

Published 11 ಜೂನ್ 2023, 14:35 IST
Last Updated 11 ಜೂನ್ 2023, 14:35 IST
ಅಕ್ಷರ ಗಾತ್ರ

ನವದೆಹಲಿ: 2021–22ರಲ್ಲಿ ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟವರ ಪ್ರಮಾಣ ಶೇ 14.6ರಷ್ಟಿತ್ತು. ಇದು, ಅದೇ ಅವಧಿಯಲ್ಲಿದ್ದ ರಾಷ್ಟ್ರೀಯ ಸರಾಸರಿಗಿಂತ (ಶೇ 12.5) ಅಧಿಕ ಎಂಬ ಅಂಶ ತಿಳಿದುಬಂದಿದೆ.

ಕರ್ನಾಟಕವಲ್ಲದೇ ಗುಜರಾತ್‌, ಬಿಹಾರ, ಅಸ್ಸಾಂ ಹಾಗೂ ಪಂಜಾಬ್‌ನಲ್ಲಿ ಕೂಡ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಮಕ್ಕಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ ಎಂದು ‘ಯೋಜನಾ ಅನುಮೋದನೆ ಮಂಡಳಿ’ (ಪಿಎಬಿ) ಸಭೆಯ ಟಿಪ್ಪಣಿಯಲ್ಲಿ ಹೇಳಲಾಗಿದೆ.

2023–24ನೇ ಸಾಲಿನಲ್ಲಿ ‘ಸಮಗ್ರ ಶಿಕ್ಷಣ’ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲು ಶಿಕ್ಷಣ ಸಚಿವಾಲಯ ಕಳೆದ ಮಾರ್ಚ್‌ ಹಾಗೂ ಮೇನಲ್ಲಿ ‘ಯೋಜನಾ ಅನುಮೋದನೆ ಮಂಡಳಿ’ಯ ಸಭೆಗಳನ್ನು ನಡೆಸಿತ್ತು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

2030ರ ವೇಳೆಗೆ ಶಾಲೆಗಳಲ್ಲಿ ‘ಒಟ್ಟು ದಾಖಲಾತಿ ಪ್ರಮಾಣ’ (ಜಿಇಆರ್) ಶೇ 100ರಷ್ಟಾಗಬೇಕು ಎಂಬ ಗುರಿಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಆದರೆ, ಶಾಲೆಯನ್ನು ಅರ್ಧಕ್ಕೆ ಬಿಡುವ ಈ ವಿದ್ಯಮಾನ ನಿಗದಿತ ಗುರಿ ಸಾಧನೆಗೆ ಅಡ್ಡಿಯಾಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟವರ ಕುರಿತ ಮಾಹಿತಿ ಈ ಸಭೆಯ ಟಿಪ್ಪಣಿಯಲ್ಲಿ ಇಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ 2020–21 ರಿಂದ 2021–22ರ ವರಗಿನ ಅವಧಿಯಲ್ಲಿ ಪೂರ್ವಪ್ರಾಥಮಿಕ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಪ್ರೌಢಶಾಲಾ ಹಂತದಲ್ಲಿ ಈ ಪ್ರಮಾಣ ಹೆಚ್ಚುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಸಂಖ್ಯೆ ದೆಹಲಿಯಲ್ಲಿ ಹೆಚ್ಚಿದೆ. ಇಂಥ ವಿದ್ಯಾರ್ಥಿಗಳ ಕುರಿತ ಮಾಹಿತಿಯನ್ನು ‘ಪ್ರಬಂಧ’ ಪೋರ್ಟಲ್‌ನಲ್ಲಿ ಅಳವಡಿಸಬೇಕು ಎಂದೂ ಹೇಳಲಾಗಿದೆ.

ಟಿಪ್ಪಣಿಯ ಪ್ರಮುಖ ಅಂಶಗಳು

* ದೇಶದಲ್ಲಿ ಶೇ 33ರಷ್ಟು ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡಲು ಮನೆಗೆಲಸವೇ ಕಾರಣ ಎಂದು ಯುನಿಸೆಫ್‌ ನಡೆಸಿದ ಸಮೀಕ್ಷೆ ಹೇಳುತ್ತದೆ.

* ಪಾಲಕರೊಂದಿಗೆ ಕೂಲಿ ಕೆಲಸ ಅಥವಾ ಇತರರ ಮನೆಗಳಲ್ಲಿ ದುಡಿಯುವ ಸಲುವಾಗಿ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT