ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯೋತ್ಸವ: ಮುಖ್ಯ ಅತಿಥಿಗಳಾಗಿ ಪಂಚಾಯತ್, ಕ್ಷೇತ್ರ ಮಟ್ಟದ ‘ಸಾಧಕಿ’ಯರು

Published : 13 ಆಗಸ್ಟ್ 2024, 15:28 IST
Last Updated : 13 ಆಗಸ್ಟ್ 2024, 15:28 IST
ಫಾಲೋ ಮಾಡಿ
Comments

ನವದೆಹಲಿ: ರಾಜಧಾನಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ವಿವಿಧ ರಾಜ್ಯಗಳಿಂದ 400ಕ್ಕೂ ಅಧಿಕ ಪಂಚಾಯತ್‌ ಸದಸ್ಯೆಯರು, ‘ಲಾಖ್‌ಪತಿ ದೀದಿ’ಯರನ್ನು ವಿಶೇಷ ಅತಿಥಿಗಳಾಗಿ ಪಂಚಾಯತ್ ರಾಜ್‌ ಸಚಿವಾಲಯವು ಆಹ್ವಾನಿಸಿದೆ.

ಅಧಿಕಾರಿಗಳ ಪ್ರಕಾರ, ಬುಧವಾರದಂದು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅವರು ವಿವಿಧ ರಾಜ್ಯಗಳಿಂದ ಆಹ್ವಾನಿಸಲಾದ 45 ಮಂದಿ ಲಾಖ್‌ಪತಿ ದೀದಿಯರು, 30 ಮಂದಿ ಡ್ರೋನ್‌ ದೀದಿಯರಿಗೆ ಸನ್ಮಾನಿಸುವರು.

ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬಿಗಳಾಗಿಸಲು ಕೇಂದ್ರ ಸರ್ಕಾರವು ‘ನಮೋ ಡ್ರೋನ್‌ ದೀದಿ’ ಮತ್ತು ‘ಲಾಖ್‌ಪತಿ ದೀದಿ’ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಮೋ ಡ್ರೋನ್‌ ದೀದಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ (ಎಸ್‌ಎಚ್‌ಜಿ) ಡ್ರೋನ್‌ ಖರೀದಿಸಲು ಸಬ್ಸಿಡಿ ನೀಡಲಾಗುತ್ತದೆ. ಸ್ವಸಹಾಯ ಸಂಘಗಳಲ್ಲಿ ವಾರ್ಷಿಕ 1 ಲಕ್ಷಕ್ಕೂ ಅಧಿಕ ಆದಾಯವುಳ್ಳ ಸದಸ್ಯೆಯರನ್ನು ‘ಲಾಖ್‌ಪತಿ ದೀದಿ’ ಎಂದು ಗುರುತಿಸಲಾಗುತ್ತದೆ.

ಪಂಚಾಯಿತಿ ಸದಸ್ಯೆಯರನ್ನು ಪಂಚಾಯತ್ ರಾಜ್ ಸಚಿವ ರಾಜೀವ್‌ ರಂಜನ್ ಸಿಂಗ್ ಲಾಲನ್‌ ಅವರು ಸನ್ಮಾನಿಸುವರು.

ಅಲ್ಲದೆ, ಆಹ್ವಾನಿತ ಸದಸ್ಯೆಯರಿಗಾಗಿ ಅದೇ ದಿನ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮಾಜಿ ರಾಜ್ಯಪಾಲರಾದ ಕಿರಣ್‌ ಬೇಡಿ, ಸಚಿವಾಲಯದ ಹಿರಿಯ ಅಧಿಕಾರಿಗಳು ಮಾತನಾಡುವರು ಎಂದು ಹೇಳಿಕೆ ತಿಳಿಸಿದೆ.

ಇದೇ ವೇಳೆ ‘ಭಾಷಿಣಿ’ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಹುಭಾಷಾ ವೇದಿಕೆ ‘ಇ–ಗ್ರಾಮಸ್ವರಾಜ್‌’ಗೆ ಚಾಲನೆ ನೀಡಲಾಗುತ್ತದೆ. 22 ಭಾಷೆಗಳಲ್ಲಿ ಈ ಪೋರ್ಟಲ್‌ ಲಭ್ಯವಿದೆ. ರಾಜ್ಯವಾರು ಪಂಚಾಯತ್‌ಗಳ ವಿವರಗಳನ್ನು ಒದಗಿಸಲಿದೆ.

ಮಹಿಳಾ ಸದಸ್ಯೆಯರ ಕಾರ್ಯಾನುಭವ ವಿಸ್ತರಿಸುವ ಕ್ರಮವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ರಾಜಧಾನಿಯ ಭೇಟಿ ಅವಧಿಯಲ್ಲಿ ಸದಸ್ಯೆಯರು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೂ ಭೇಟಿ ನೀಡುವರು ಎಂದು ತಿಳಿಸಿದೆ.

ಕ್ಷೇತ್ರ ಮಟ್ಟದ ಸಾಧಕಿಯರಿಗೂ ಆಹ್ವಾನ: ಅಲ್ಲದೆ, ಮಹಿಳಾ ಸಬಲೀಕರಣ, ಮಕ್ಕಳ ಕಲ್ಯಾಣ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಗಣನೀಯ ಪಾತ್ರ ವಹಿಸಿರುವ 161 ಸದಸ್ಯೆಯರನ್ನು ಮುಖ್ಯಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು, ಸಖಿ ಕೇಂದ್ರದ ನೌಕರರು, ಮಹಿಳಾ ಕಲ್ಯಾಣ ಸಮಿತಿ ಸದಸ್ಯರು, ಜಿಲ್ಲಾ ಮಕ್ಕಳ ಹಕ್ಕುಗಳ ಘಟಕಗಳ ಸದಸ್ಯೆಯರು ಇವರಲ್ಲಿ ಸೇರಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT