ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಸೀಟು ಹಂಚಿಕೆ: ಕಾಂಗ್ರೆಸ್‌–ಟಿಎಂಸಿ ವಾಕ್ಸಮರ

Published 4 ಜನವರಿ 2024, 15:58 IST
Last Updated 4 ಜನವರಿ 2024, 15:58 IST
ಅಕ್ಷರ ಗಾತ್ರ

ಕೋಲ್ಕತ್ತ : ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಗಳ ನಡುವೆ ಇರುವ ಭಿನ್ನಮತ, ‘ಇಂಡಿಯಾ’ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಧಿರ್‌ ರಂಜನ್‌ ಚೌಧರಿ, ‘ಅತ್ಯಂತ ಹಿರಿಯ ಪಕ್ಷವಾಗಿರುವ ಕಾಂಗ್ರೆಸ್‌ ಈಗ ಸೀಟುಗಳಿಗಾಗಿ ಟಿಎಂಸಿ ಎದುರು ಅಂಗಲಾಚುವುದಿಲ್ಲ’ ಎಂದು ಟೀಕಿಸಿದ್ದಾರೆ. ಇದಕ್ಕೆ ಕಟುವಾಗಿಯೇ ಪ್ರತಿಕ್ರಿಯಿಸಿರುವ ಟಿಎಂಸಿಯು, ‘ಒಡಕುಬಾಯಿಯ ಮೈತ್ರಿ ಪಾಲುದಾರರು ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ಒಟ್ಟಿಗೆ ಸಾಗುವುದು ಸಾಧ್ಯವಿಲ್ಲ’ ಎಂದು ಹೇಳಿದೆ.

‘ಮೈತ್ರಿಕೂಟ ಬಲಪಡಿಸುವ ಬದಲು ಪ್ರಧಾನಿಯವರ ಸೇವೆಯಲ್ಲೇ ಟಿಎಂಸಿ ಹೆಚ್ಚು ನಿರತವಾಗಿದೆ’ ಎಂದೂ ಚೌಧರಿ ಟೀಕಿಸಿದ್ದರು. ‘ಚೌಧರಿ ನಿರ್ದಯವಾಗಿ ಹೇಳಿಕೆ ನೀಡುತ್ತಿದ್ದು, ನಿಯಂತ್ರಿಸಬೇಕು ಎಂದು ಟಿಎಂಸಿ, ಕಾಂಗ್ರೆಸ್‌ ಹೈಕಮಾಂಡ್‌ಗೆ ಆಗ್ರಹಪಡಿಸಿತ್ತು.

ಕಾಂಗ್ರೆಸ್‌ಗೆ ಎರಡು ಕ್ಷೇತ್ರ ಬಿಡುತ್ತೇವೆ ಅಥವಾ ಕಾಂಗ್ರೆಸ್‌ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಲು ಅವರು ಯಾರು? ಅಗತ್ಯಬಿದ್ದರೆ ನಾವು ಪ್ರತ್ಯೇಕವಾಗೇ ಸ್ಪರ್ಧಿಸುತ್ತೇವೆ. ಪಕ್ಷದ ಹೈಕಮಾಂಡ್‌ ಈ ಬಗ್ಗೆ ನಿರ್ಧರಿಸಲಿದೆ ಎಂದು ಚೌಧರಿ ಹೇಳಿದರು.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಉಭಯ ಪಕ್ಷಗಳಿಗೆ ಮಹತ್ವದ್ದಾಗಿದೆ. ಕಾಂಗ್ರೆಸ್‌ಗೆ ಎರಡು ಸೀಟುಗಳನ್ನಷ್ಟೇ ಬಿಟ್ಟುಕೊಡಲು ಟಿಎಂಸಿ ಸಿದ್ಧವಿದೆ ಎಂಬ ಮಾಧ್ಯಮ ವರದಿಗಳಿವೆ. ಈ ಅನುಪಾತಕ್ಕೆ ಒಪ್ಪಿಗೆ ಇಲ್ಲ ಎಂದು ಕಾಂಗ್ರೆಸ್‌ ರಾಜ್ಯ ಘಟಕ ಪ್ರತಿಕ್ರಿಯಿಸಿದೆ. 2019ರ ಚುನಾವಣೆಯಲ್ಲಿ ಟಿಎಂಸಿ 22 ಸೀಟು ಗೆದ್ದಿದ್ದರೆ, ಕಾಂಗ್ರೆಸ್ ಎರಡು ಮತ್ತು ಬಿಜೆಪಿ 18 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಉಭಯ ಪಕ್ಷಗಳ ನಡುವೆ ಕೆಲ ದಿನಗಳಿಂದ ವಾಕ್ಸಮರ ನಡೆದಿದ್ದು, ಚೌಧರಿ ಕಟುಟೀಕೆಯೊಂದಿಗೆ ಗುರುವಾರ ತಾರಕ್ಕೇರಿದೆ.

ಕಾಂಗ್ರೆಸ್‌ಗೆ ನಾಲ್ಕು ಕ್ಷೇತ್ರ ಬಿಟ್ಟುಕೊಡಲು ಟಿಎಂಸಿ ತೀರ್ಮಾನಿಸಿದೆ ಎನ್ನಲಾಗಿದೆ. ಡಿ.19ರ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ, ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಲು ಡಿ.31ರ ಗಡುವನ್ನು ಟಿಎಂಸಿ ನಿಗದಿಪಡಿಸಿತ್ತು. ಆದರೆ, ಇನ್ನೂ ಅಂತಿಮಗೊಂಡಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT