ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ 4 ತಿಂಗಳಲ್ಲಿ 18 ಸಾವಿರ ಟನ್‌ 'ಕೋವಿಡ್‌ ತ್ಯಾಜ್ಯ’!

ಮಹಾರಾಷ್ಟ್ರ ರಾಜ್ಯದ ಪಾಲು ಹೆಚ್ಚು: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
Last Updated 12 ಅಕ್ಟೋಬರ್ 2020, 10:26 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ತಿಂಗಳಲ್ಲಿ ಭಾರತದಾದ್ಯಂತ 18 ಸಾವಿರ ಟನ್ನಿನಷ್ಟು ‘ಕೋವಿಡ್‌ 19‘ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿದ್ದು, ಇದರಲ್ಲಿ ಮಹಾರಾಷ್ಟ್ರ ರಾಜ್ಯದ್ದು ‘ಸಿಂಹ ಪಾಲು‘!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶದ ಪ್ರಕಾರ, ಮಹಾರಾಷ್ಟ್ರ ಒಂದರಲ್ಲೇ 3587 ಟನ್ ತ್ಯಾಜ್ಯ‌ ಉತ್ಪಾದನೆಯಾಗಿದೆ. ನಂತರದಲ್ಲಿ ತಮಿಳುನಾಡು–1737 ಟನ್‌,ಗುಜರಾತ್– 1638 ಟನ್‌, ಕೇರಳ– 1516ಟನ್‌, ಉತ್ತರ ಪ್ರದೇಶ– 1432 ಟನ್ , ದೆಹಲಿ–1400, ಕರ್ನಾಟಕ–1380 ಟನ್ ಮತ್ತು‌ ಪಶ್ಚಿಮ ಬಂಗಾಳದಲ್ಲಿ 1000 ಟನ್‌ ತ್ಯಾಜ್ಯ ಉತ್ಪತ್ತಿಯಾಗಿದೆ.

ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ದೇಶದಾದ್ಯಂತ 5,490 ಟನ್‌ನಷ್ಟು ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ಅವಧಿಯಲ್ಲಿ ತಮಿಳುನಾಡು (622 ಟನ್‌) ಮೊದಲ ಸ್ಥಾನ, ದೆಹಲಿ (382 ಟನ್‌) ಕಡಿಮೆ ತ್ಯಾಜ್ಯ ಸಂಗ್ರಹಿಸಿರುವ ಕೇಂದ್ರಾಡಳಿತ ಪ್ರದೇಶವಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, ಜೂನ್ ತಿಂಗಳಿನಿಂದ ಇಲ್ಲಿವರೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 18,006 ಟನ್‌ ಕೋವಿಡ್‌ 19 ಸಂಬಂಧಿತ ಆಸ್ಪತ್ರೆ ತ್ಯಾಜ್ಯ ಉತ್ಪಾದನೆಯಾಗಿದೆ. ಇಷ್ಟು ತ್ಯಾಜ್ಯವನ್ನು ದೇಶದ ನಾನಾ ಭಾಗಗಳಲ್ಲಿರುವ 198 ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ(ಸಿಬಿಡಬ್ಲುಟಿಎಫ್‌ಎಸ್‌) ಸಂಗ್ರಹಿಸಲಾಗಿದೆ.

ಕೋವಿಡ್‌ 19 ವೈದ್ಯಕೀಯ ತ್ಯಾಜ್ಯದಲ್ಲಿ ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಶೂ ಕವರ್‌ಗಳು, ಕೈಗವಸುಗಳು, ರಕ್ತ ಲೇಪಿತ ಪರಿಕರಗಳು, ರಕ್ತ ಮಿಶ್ರಿತ ದ್ರಾವಣಗಳು, ಪ್ಲಾಸ್ಟರ್‌, ಬ್ಯಾಂಡೇಚ್‌, ಕಾಟನ್ ಸ್ವಾಬ್‌, ರಕ್ತ ಅಥವಾ ದೇಹದಿಂದ ಸೋರಿಕೆಯಾದ ದ್ರವದಿಂದ ಹಾಳಾದ ಹಾಸಿಗೆಗಳು, ಖಾಲಿ ರಕ್ತದ ಚೀಲಗಳು, ಸಿರಂಜ್ ಟ್ಯೂಬ್ ಮತ್ತು ಸೂಜಿಗಳು ಸೇರಿರುತ್ತವೆ.

ಕ್ವಾರಂಟೈನ್ ಕೇಂದ್ರಗಳು, ಕ್ವಾರಂಟೈನ್ ಮನೆಗಳು, ಗಂಟಲು ದ್ರವ ಮಾದರಿ ಸಂಗ್ರಹಿಸುವ ಸ್ಥಳಗಳು, ಪ್ರಯೋಗಾಲಯಗಳು, ಮಾಲಿನ ನಿಯಂತ್ರಣ ಮಂಡಳಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜತೆಗೆ ಸಾಮಾನ್ಯ ವೈದ್ಯಕೀಯ ತ್ಯಾಜ್ಯ ಸಂಸ್ಕರಣೆ ಘಟಕಗಳಿಂದವೈದ್ಯಕೀಯ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ, ವಿಲೇವಾರಿಗಾಗಿ ಸಿಪಿಸಿಬಿ ಮಾರ್ಚ್‌ ತಿಂಗಳಲ್ಲಿ ನಿಗದಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು.

ಕೊರೊನಾವೈರಸ್‌ ಸೋಂಕಿನ ಸಂಬಂಧಿತ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ಕೇಂದ್ರ ‘ಕೋವಿಡ್‌19ಬಿಡಬ್ಲುಎಂ‘ ಎಂಬ ಮೊಬೈಲ್ ಅಪ್ಲಿಕೇಷನ್‌ ಸಿದ್ಧಪಡಿಸಿತ್ತು. ಈ ಅಪ್ಲಿಕೇಷನ್‌, ತ್ಯಾಜ್ಯ ಉತ್ಪತ್ತಿಯಾಗುವ ಸಮಯ ಮತ್ತು ಸಂಗ್ರಹ ಮತ್ತು ವಿಲೇವಾರಿಯ ಮೇಲೆ ನಿಗಾ ಇಡುತ್ತಿತ್ತು.

ಸುಪ್ರಿಂ ಕೋರ್ಟ್‌ ಕೂಡ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಮೊಬೈಲ್‌ ಅಪ್ಲಿಕೇಷನ್ ಬಳಸುವ ಮೂಲಕ ನಿತ್ಯ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯದ ಮೇಲೆ ನಿಗಾ ಇಡುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT