ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆ, ತಂತ್ರಜ್ಞಾನ ಪಾಲುದಾರಿಕೆಗೆ ಆದ್ಯತೆ; ಭಾರತ-ಅಮೆರಿಕ ಸಚಿವರ ಜಂಟಿ ಮಾತುಕತೆ

Published 10 ನವೆಂಬರ್ 2023, 16:04 IST
Last Updated 10 ನವೆಂಬರ್ 2023, 16:04 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಪರಿಕರಗಳ ಉತ್ಪಾದನೆ, ಖನಿಜಯುಕ್ತ ಸಂಪನ್ಮೂಲ, ಉನ್ನತ ತಂತ್ರಜ್ಞಾನ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಶುಕ್ರವಾರ ವಿಸ್ತೃತ ಚರ್ಚೆ ನಡೆಸಿದವು.

ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಸೇನೆಯು ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳತ್ತ ಹೆಚ್ಚಿನ ಗಮನಹರಿಸಲು ಉಭಯ ರಾಷ್ಟ್ರಗಳು ಒತ್ತು ನೀಡಿವೆ.

ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಘರ್ಷದಿಂದ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಭಾರತ-ಅಮೆರಿಕ ‘2 + 2’ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಾತುಕತೆ ನಡೆಯಿತು.

ಅಮೆರಿಕದ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ವಹಿಸಿದ್ದರೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ನಿಯೋಗದ ನೇತೃತ್ವ ವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ದೂರದೃಷ್ಟಿಯ ಯೋಜನೆಗಳನ್ನು ಮುನ್ನಡೆಸಲು ಮತ್ತು ಹಂಚಿಕೆಯ ಜಾಗತಿಕ ಕಾರ್ಯಸೂಚಿ ನಿರ್ಮಿಸಲು ಈ ಸಂವಾದ ಒಂದು ಅವಕಾಶವಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

‘ಅಮೆರಿಕ ಮತ್ತು ಭಾರತವು ದೃಢವಾದ ಪಾಲುದಾರಿಕೆ ಹೊಂದಿವೆ. ನಾವು ಅಂತರರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ನಿರ್ದಿಷ್ಟವಾಗಿ ನಿಯಮ ಆಧಾರಿತ ಕ್ರಮ ಉತ್ತೇಜಿಸಲು ಮತ್ತು ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿದ್ದೇವೆ. ನಮ್ಮ ರಕ್ಷಣಾ ಸಹಕಾರವು ಆ ಕೆಲಸದ ಪ್ರಮುಖ ಆಧಾರಸ್ತಂಭವಾಗಿದೆ’ ಎಂದು ಬ್ಲಿಂಕೆನ್‌ ಹೇಳಿದರು.

ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಖನಿಜಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಎರಡೂ ಕಡೆಯವರು ಅನ್ವೇಷಿಸುತ್ತಿದ್ದಾರೆ ಎಂದು ಜೈಶಂಕರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಪ್ರಮುಖ ಅಂಶವೆಂದರೆ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಎರಡೂ ದೇಶಗಳ ನಡುವಿನ  ಸಂಬಂಧದಲ್ಲಿ ಹೊಸ ಅಧ್ಯಾಯ ತೆರೆದಿದೆ. ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಬೈಡನ್ ಅವರ ದೆಹಲಿ ಭೇಟಿ ಸಹ ಸಕಾರಾತ್ಮಕ ಪಥಕ್ಕೆ ಅಪಾರ ಕೊಡುಗೆ ನೀಡಿದೆ ಎಂದಿದ್ದಾರೆ.

‘ಭಾರತ– ಅಮೆರಿಕದ ದ್ವಿಪಕ್ಷೀಯ ಕಾರ್ಯಸೂಚಿಯ ಎಲ್ಲಾ ಅಂಶಗಳಲ್ಲಿ ನಾವು ವೇಗವಾಗಿ ದಾಪುಗಾಲು ಹಾಕುತ್ತಿದ್ದೇವೆ. ನಮ್ಮ ವ್ಯಾಪಾರ ವಹಿವಾಟು ಇಂದು 200 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ, ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಎರಡೂ ಕಡೆಯಿಂದಲೂ ಹೆಚ್ಚುತ್ತಿದೆ ಎಂದು ಜೈಶಂಕರ್‌ ಹೇಳಿದರು.

’ವಿವಿಧ ಭೌಗೋಳಿಕ ರಾಜಕೀಯ ಸವಾಲುಗಳ ಹೊರತಾಗಿಯೂ, ಪ್ರಮುಖ ಮತ್ತು ದೀರ್ಘಕಾಲೀನ ವಿಷಯಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಬೇಕಾಗಿದೆ. ಮುಕ್ತ ಮತ್ತು ನಿಯಮಬದ್ಧ ಇಂಡೋ-ಪೆಸಿಫಿಕ್ ಪ್ರದೇಶ ಖಚಿತಪಡಿಸಿಕೊಳ್ಳಲು ನಮ್ಮ ಪಾಲುದಾರಿಕೆ ನಿರ್ಣಾಯಕವಾಗಿದೆ’ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಸಾಮರ್ಥ್ಯ ವರ್ಧನೆ ಮತ್ತು ಸವಾಲುಗಳನ್ನು ಎದುರಿಸಬಲ್ಲ ನಿರಂತರ ಪಾಲುದಾರಿಕೆಗಾಗಿ ರಕ್ಷಣಾ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದರು.

ತುರ್ತು ಜಾಗತಿಕ ಸವಾಲುಗಳ ಹಿನ್ನೆಲೆಯಲ್ಲಿ, ವಿಶ್ವದ ಎರಡು ದೇಶಗಳು ಸಾಮಾನ್ಯ ಗುರಿಗಳನ್ನು ಕಂಡುಕೊಳ್ಳುವುದು ಮತ್ತು ನಮ್ಮ ಜನರಿಗೆ ತಲುಪಿಸುವುದು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ ಎಂದು ಆಸ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT