ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ವೇಗ ಪಡೆಯದ ಲಸಿಕೆ ನೀಡಿಕೆ

Last Updated 6 ಮಾರ್ಚ್ 2021, 1:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ತಡೆ ಲಸಿಕೆ ಕಾರ್ಯಕ್ರಮವು ಯೋಜಿಸಿದಷ್ಟು ವೇಗವಾಗಿ ಜಾರಿ ಆಗುತ್ತಿಲ್ಲ. ಈವರೆಗೆ ಖರೀದಿಸಲಾದ ಲಸಿಕೆಗಳಲ್ಲಿ ಅರ್ಧಕ್ಕಿಂತ ಕಡಿಮೆ ಲಸಿಕೆಗಳು ಮಾತ್ರ ಬಳಕೆ ಆಗಿವೆ. ಹಾಗಾಗಿ, ಲಸಿಕೆ ಕಾರ್ಯಕ್ರಮಕ್ಕೆ ವೇಗ ತುಂಬುವ ಅಗತ್ಯ ಇದೆ.

ಸತತ ಎರಡು ದಿನ ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂಬುದು ನಿಜ. ಆದರೆ, ಖರೀದಿಸಲಾದ ಲಸಿಕೆಗಳ ಒಟ್ಟು ಸಂಖ್ಯೆ 4.1 ಕೋಟಿ. ಇದರಲ್ಲಿ 2 ಕೋಟಿ ಲಸಿಕೆಗಳನ್ನು ಮಾತ್ರ ಜನರಿಗೆ ನೀಡಲಾಗಿದೆ.

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ 4.1 ಕೋಟಿ ಡೋಸ್ ಲಸಿಕೆಗಳನ್ನು ಖರೀದಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ತಿಂಗಳು ಹೇಳಿತ್ತು. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಉದ್ದೇಶದಿಂದ ಈ ಲಸಿಕೆಗಳನ್ನು ಖರೀದಿಸಲಾಗುವುದು ಎಂದು ಹೇಳಲಾಗಿತ್ತು.

ಆದರೆ, ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಈ ಎರಡೂ ವರ್ಗಗಳಲ್ಲಿ ಹಿಂಜರಿಕೆ ಕಂಡು ಬಂದಿತ್ತು. ಹಾಗಾಗಿ, ಶೇ 50ರಷ್ಟು ಲಸಿಕೆಗಳು ಮಾತ್ರ ಬಳಕೆ ಆಗಿದ್ದವು. ಉಳಿದ ಲಸಿಕೆಗಳನ್ನು ಎರಡನೇ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗುತ್ತಿದೆ. 60 ವರ್ಷ ದಾಟಿದವರು ಮತ್ತು 45–59ರ ವಯೋಮಾನದ ಬೇರೆ ಕಾಯಿಲೆಗಳಿರುವ 27 ಕೋಟಿ ಜನರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.

4.1 ಕೋಟಿ ಡೋಸ್‌ ಲಸಿಕೆಗಳ ಪೈಕಿ ಒಂದು ಕೋಟಿ ಡೋಸ್‌ ಲಸಿಕೆಗಳು ಅಂತರರಾಷ್ಟ್ರೀಯ ಲಸಿಕೆ ಮೈತ್ರಿಕೂಟ ‘ಗವಿ’ಯ ಭಾಗವಾಗಿ ಸಿಕ್ಕಿದೆ.

ಆಗಸ್ಟ್‌ ಹೊತ್ತಿಗೆ 30 ಕೋಟಿ ಜನರಿಗೆ ಲಸಿಕೆ ಹಾಕಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈ ಗುರಿ ಸಾಧನೆ ಆಗಬೇಕಿದ್ದರೆ ಲಸಿಕೆ ನೀಡಿಕೆ ಕಾರ್ಯಕ್ರಮವು ವೇಗ ಪಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಪರಿಣತರಲ್ಲಿ ಸಹಮತ ಇದೆ.

‘30 ಕೋಟಿ ಜನರಿಗೆ ಆಗಸ್ಟ್‌ ಹೊತ್ತಿಗೆ ಲಸಿಕೆ ಹಾಕಬೇಕಿದ್ದರೆ ಪ್ರತಿ ದಿನ 40ರಿಂದ 50 ಲಕ್ಷ ಜನರಿಗೆ ಲಸಿಕೆ ಹಾಕಬೇಕು. ಆದರೆ, ಈಗಿನ ಸರಾಸರಿ ದಿನಕ್ಕೆ 4 ಲಕ್ಷ ಮಾತ್ರ ಇದೆ. ಒಂದು ತಿಂಗಳಿನಿಂದ ಪರಿಸ್ಥಿತಿ ಹೀಗೆಯೇ ಇದೆ. ಲಸಿಕೆ ನೀಡಿಕೆಯು ಈಗ ಇರುವುದಕ್ಕಿಂತ 10‍ಪಟ್ಟು ಹೆಚ್ಚಬೇಕಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಸಲಹೆಗಾರ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ರಿಜೊ ಜಾನ್‌ ಹೇಳುತ್ತಾರೆ.

‘ಲಸಿಕೆ ನೀಡುವವರ ಆತ್ಮಸ್ಥೈರ್ಯವನ್ನು ಮುಂದಿನ ಕೆಲವು ತಿಂಗಳವರೆಗೆ ಉಳಿಸಿಕೊಳ್ಳುವುದು ಮತ್ತು ಸದ್ಯದಲ್ಲೇ ಕಾಲಿಡಲಿರುವ ಬೇಸಿಗೆಯನ್ನು ಎದುರಿಸುವುದು ಲಸಿಕೆ ಕಾರ್ಯಕ್ರಮದ ಮುಂದೆ ಇರುವ ದೊಡ್ಡ ಸವಾಲು. ಆಗಸ್ಟ್‌ ಹೊತ್ತಿಗೆ 30 ಕೋಟಿ ಜನರಿಗೆ ಲಸಿಕೆ ಹಾಕಿಸುವುದು ಅಸಾಧ್ಯವಾದ ಗುರಿಯೇನೂ ಅಲ್ಲ. ಆದರೆ, ಲಸಿಕೆ ನೀಡಿಕೆಗೆ ವೇಗ ತುಂಬುವುದು ಅಗತ್ಯ’ ಎಂದು ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗೌತಮ್‌ ಮೆನನ್ ಹೇಳುತ್ತಾರೆ.

1.8 ಕೋಟಿ ಜನರಿಗೆ ಲಸಿಕೆ

ಶುಕ್ರವಾರ ಬೆಳಗ್ಗಿನ ವರೆಗಿನ ಅಂಕಿ ಅಂಶದ ಪ್ರಕಾರ, 1.8 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 60ಕ್ಕಿಂತ ಹೆಚ್ಚು ವಯಸ್ಸಾದ 16 ಲಕ್ಷ ಜನರು ಮತ್ತು 45–59ರ ವಯೋಮಾನದ 2.36 ಲಕ್ಷ ಜನರು ಸೇರಿದ್ದಾರೆ. 68 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 60 ಲಕ್ಷ ಕೋವಿಡ್‌ ಮುಂಚೂಣಿ ಕಾರ್ಯಕರ್ತರು ಈವರೆಗೆ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. 30 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 67 ಸಾವಿರ ಕೋವಿಡ್‌ ಮುಂಚೂಣಿ ಕಾರ್ಯಕರ್ತರು ಈವರೆಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT