ನವದೆಹಲಿ: ಮೂರು ವಾರಗಳಲ್ಲಿ ಬಾಹ್ಯಾಕಾಶದಲ್ಲಿ 3 ಲಕ್ಷಕ್ಕೂ ಅಧಿಕ ದೂರ ಕ್ರಮಿಸಿದ ನಂತರ ‘ಚಂದ್ರಯಾನ–3’ ಗಗನನೌಕೆಯು ಶನಿವಾರ ಚಂದ್ರನ ಕಕ್ಷೆ ಯಶಸ್ವಿಯಾಗಿ ಸೇರಿತು. ಈ ಮಹತ್ವದ ಆಕಾಶಯಾನದೊಂದಿಗೆ ಚಂದ್ರನ ಮೇಲ್ಮೈನಲ್ಲಿ ಗಗನನೌಕೆ ಇಳಿಯುವುದಕ್ಕೆ ದಿನಗಣನೆ ಕೂಡ ಆರಂಭವಾದಂತಾಗಿದೆ.
‘ಚಂದ್ರಯಾನ–3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಬೆಂಗಳೂರಿನಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ’ ಎಂದು ಇಸ್ರೊ ತಿಳಿಸಿದೆ.
‘ಎಂಒಎಕ್ಸ್, ಐಎಸ್‌ಟಿಆರ್‌ಎಸಿ, ಇದು ಚಂದ್ರಯಾನ–3. ನನಗೀಗ ಚಂದ್ರನ ಗುರುತ್ವಾಕರ್ಷಣ ಶಕ್ತಿಯ ಅನುಭವವಾಗುತ್ತಿದೆ’ ಎಂದು ಇಸ್ರೊ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (ಈ ಮೊದಲಿನ ಟ್ವಿಟರ್) ಸಂದೇಶವೊಂದನ್ನು ಹಂಚಿಕೊಂಡಿದೆ.
ಮುಂದಿನ 18 ದಿನಗಳ ಅವಧಿಯಲ್ಲಿ ‘ಚಂದ್ರಯಾನ–3’ ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡಿ, ಅದನ್ನು ಚಂದ್ರನಿಂದ 100 ಕಿ.ಮೀ. ಅಂತರದ ಕೆಳ ಕಕ್ಷೆಗೆ ತರಲಾಗುತ್ತದೆ. ನಂತರ, ಆಗಸ್ಟ್ 23ರ ಸಂಜೆ 5.47ಕ್ಕೆ ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
‘ನೌಕೆಯ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಚಂದ್ರನ ಕಕ್ಷೆಯಲ್ಲಿ ಕೈಗೊಳ್ಳಬೇಕಿರುವ ಮುಂದಿನ ಕಾರ್ಯಾಚರಣೆಯನ್ನು ಭಾನುವಾರ ನೆರವೇರಿಸಲಾಗುತ್ತದೆ’ ಎಂದೂ ತಿಳಿಸಿದೆ.
ರೋವರ್ (ಪ್ರಜ್ಞಾನ್) ಹೊತ್ತ ಲ್ಯಾಂಡರ್ (ವಿಕ್ರಮ್) ಚಂದ್ರಯಾನ–3 ನೌಕೆಯಿಂದ ಬೇರ್ಪಟ್ಟು, ಚಂದ್ರನತ್ತ ಪಯಣ ಬೆಳೆಸಲಿದೆ.
ನೌಕೆಯಲ್ಲಿ ಅಳವಡಿಸಿರುವ ಮತ್ತೊಂದು ಸಾಧನ ‘ಶೇಪ್’ (ಸ್ಪೆಕ್ಟ್ರೊ ಪೋಲರಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ಥ್) ಚಂದ್ರನ ಕಕ್ಷೆಯಲ್ಲಿಯೇ ಪರಿಭ್ರಮಿಸಲಿದೆ. ಈ ಸಾಧನವು ಬಾಹ್ಯಾಕಾಶ ಕುರಿತು ಕಳಿಸುವ ಡೇಟಾವನ್ನು ಸೌರಮಂಡಲದಾಚೆ ಇದ್ದಿರಬಹುದಾದ, ಭೂಮಿಯನ್ನೇ ಹೋಲುವಂತಹ ಗ್ರಹಗಳ ಅನ್ವೇಷಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಅಶೋಕ ವಿಶ್ವವಿದ್ಯಾಲಯದ ಖಭೌತ ವಿಜ್ಞಾನಿ ಸೋಮಕ್ ರಾಯಚೌಧರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.