ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಸರ್ವೇಕ್ಷಣೆ 2023: ಮಹಾರಾಷ್ಟ್ರ ಸ್ವಚ್ಛ ರಾಜ್ಯ, ಇಂದೋರ್‌ ಸ್ವಚ್ಛ ನಗರ

Published 11 ಜನವರಿ 2024, 7:14 IST
Last Updated 11 ಜನವರಿ 2024, 7:14 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ 2023ನೇ ಸಾಲಿನ ವಾರ್ಷಿಕ ಸ್ವಚ್ಛತಾ ಸರ್ವೇಕ್ಷಣೆಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್‌ ಸತತ ಏಳನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ.

ಸುಸ್ಥಿರ ಮತ್ತು ಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಇಂದೋರ್‌ ಅಗ್ರಸ್ಥಾನಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಇಂದೋರ್‌ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸ್ವಚ್ಛ ನಗರ’ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಮತ್ತು ಸಚಿವ ಕೈಲಾಶ್‌ ವಿಜಯ್‌ವರ್ಗೀಯ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ.

ಉತ್ತಮ ಪ್ರದರ್ಶನ ನೀಡಿದ ರಾಜ್ಯಗಳ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸಗಢ ಅನಂತರದ ಸ್ಥಾನಗಳಲ್ಲಿವೆ.

ಮಧ್ಯಪ್ರದೇಶದ ಕೈಗಾರಿಕಾ ರಾಜಧಾನಿ ಎಂದು ಕರೆಯಲ್ಪಡುವ ಇಂದೋರ್‌ ಈ ಬಾರಿ ಮೊದಲ ಸ್ಥಾನವನ್ನು ಗುಜರಾತ್‌ನ ಸೂರತ್‌ ನಗರದ ಜೊತೆ ಹಂಚಿಕೊಂಡಿದೆ.

‘ತ್ಯಾಜ್ಯದಿಂದ ಸಂಪತ್ತು’ ಎಂಬ ವಿಷಯವನ್ನು ಆಧರಿಸಿ ಸರ್ವೇಕ್ಷಣೆ ನಡೆದಿದೆ. ಸರ್ವೇಕ್ಷಣೆಯ ವಿವಿಧ ವಿಭಾಗಗಳಲ್ಲಿ 4,400ಕ್ಕೂ ಹೆಚ್ಚು ನಗರಗಳು ಕಠಿಣ ಸ್ಪರ್ಧೆ ನೀಡಿದ್ದವು ಎಂದು ಮೂಲಗಳು ತಿಳಿಸಿವೆ.

ತ್ಯಾಜ್ಯ ಸಂಗ್ರಹಿಸುವ ಸುಸ್ಥಿರ ವ್ಯವಸ್ಥೆ, ಅವುಗಳ ಸಂಸ್ಕರಣೆ ಮತ್ತು ವಿಲೇವಾರಿಯಲ್ಲಿ ಇಂದೋರ್‌ ನಗರವು ಮುಂದಿದೆ. ಈ ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ತ್ಯಾಜ್ಯಗಳ ಪ್ರಮಾಣ ಇಳಿಕೆಯಾಗಿದೆ ಎಂದು ಇಂದೋರ್‌ ಮಹಾನಗರ ಪಾಲಿಕೆಯ ಸ್ವಚ್ಛ ಭಾರತ ಅಭಿಯಾನದ ಸಲಹೆಗಾರ ಅಮಿತ್‌ ದುಬೆ ತಿಳಿಸಿದ್ದಾರೆ.

ನಗರದ 4.65 ಲಕ್ಷ ಕುಟುಂಬಗಳು ಮತ್ತು 70,543 ವಾಣಿಜ್ಯ ಸಂಸ್ಥೆಗಳು ವ್ಯವಸ್ಥಿತವಾಗಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡಿವೆ. ಬಳಿಕ ಅದನ್ನು ನಗರದ ವಿವಿಧ ಘಟಕಗಳಲ್ಲಿ ಸಂಸ್ಕರಿಸಿ, ಅನಂತರ ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇಂದೋರ್‌ನಲ್ಲಿ ಪ್ರತಿದಿನ ಅಂದಾಜು 692 ಟನ್‌ ಹಸಿತ್ಯಾಜ್ಯ, 693 ಟನ್‌ ಒಣ ತ್ಯಾಜ್ಯ ಮತ್ತು 179 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT