ಶ್ರೀಹರಿಕೋಟಾ: ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್: ಎಸ್‌ಎಸ್‌ಎಲ್‌ವಿ-ಡಿ2)’ ಶುಕ್ರವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ನಭಕ್ಕೆ ಹಾರಿತು.
ಉಪಗ್ರಗಳೆಲ್ಲವೂ ಕಕ್ಷೆಗೆ ಸೇರಿದ್ದು, ಬಾಹ್ಯಾಕಾಶ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ಇಸ್ರೋ ತಿಳಿಸಿದೆ.
SSLV-D2/EOS-07 Mission is accomplished successfully.
— ISRO (@isro) February 10, 2023
SSLV-D2 placed EOS-07, Janus-1, and AzaadiSAT-2 into their intended orbits.
‘ಎಸ್‌ಎಸ್‌ಎಲ್‌ವಿ’ಯ ಎರಡನೇ ಆವೃತ್ತಿಯಾದ ‘ಎಸ್‌ಎಸ್‌ಎಲ್‌ವಿ-ಡಿ2’ ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್–07, ಅಮೆರಿಕ ಮೂಲದ ‘ಅಂಟಾರಿಸ್’ನ ‘ಜಾನಸ್’ ಮತ್ತು ಚೆನ್ನೈನ ‘ಸ್ಪೇಸ್ ಕಿಡ್ಜ್ ಇಂಡಿಯಾ’ದ ‘ಆಜಾದಿಸ್ಯಾಟ್–2’ ಅನ್ನು ಕಕ್ಷೆಗೆ ಕಳುಹಿಸಿತು.
ಈ ವರ್ಷದಲ್ಲಿ ಇಸ್ರೊದಿಂದ ನಡೆದ ಮೊದಲ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ.
34 ಮೀಟರ್ ಎತ್ತರದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ‘ಕಿರು ಉಪಗ್ರಹ ಉಡಾವಣಾ ನೌಕೆ’ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಇಸ್ರೊ ‘ಎಸ್‌ಎಸ್‌ಎಲ್‌ವಿ’ ಮೇಲೆ ಅಪಾರವಾದ ನಿರೀಕ್ಷೆಯನ್ನಿಟ್ಟುಕೊಂಡಿದೆ.
‘ಅಜಾದಿಸ್ಯಾಟ್’ ಅನ್ನು ಹೊತ್ತ ‘ಎಸ್‌ಎಸ್‌ಎಲ್‌ವಿ’ಯ ಮೊದಲ ಆವೃತ್ತಿಯನ್ನು ಇಸ್ರೊ 2022ರ ಆಗಸ್ಟ್ 7 ರಂದು ಉಡಾಯಿಸಿತ್ತಾದರೂ, ಕಕ್ಷೆಯ ವೈಪರೀತ್ಯ, ರಾಕೆಟ್‌ನ ಹಾದಿಯಲ್ಲಿನ ವಿಚಲನೆಯಿಂದಾಗಿ ಭಾಗಶಃ ವಿಫಲವಾಗಿತ್ತು. ಕೊನೇ ಹಂತದಲ್ಲಿ ದತ್ತಾಂಶ ನಷ್ಟವಾಗಿತ್ತು.
500 ಕೆ.ಜಿಯವರೆಗಿನ ಉಪಗ್ರಹಗಳನ್ನು ಕೆಳ ಮಟ್ಟದ ಭೂಕಕ್ಷೆಗೆ ಸೇರಿಸಲು ‘ಎಸ್‌ಎಸ್‌ಎಲ್‌ವಿ’ ಉಪಯುಕ್ತವಾಗಿದೆ. ಇದು ಕಡಿಮೆ ವೆಚ್ಚ, ಕಡಿಮೆ ಸಮಯ ಮತ್ತು ಹೆಚ್ಚು ಉಪಗ್ರಹಗಳನ್ನು ಸಾಗಿಸಲು ನೆರವಾಗಲಿದೆ. ಕನಿಷ್ಠ ಉಡಾವಣಾ ಮೂಲಸೌಕರ್ಯವನ್ನು ‘ಎಸ್‌ಎಸ್‌ಎಲ್‌ವಿ’ ಬಯಸುತ್ತದೆ.
ಉಪಗ್ರಗಳ ವಿವರ
ಇಒಎಸ್–07: ಇದು 156.3 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇಸ್ರೊ ಅಭಿವೃದ್ಧಿಪಡಿಸಿದೆ.
ಜಾನಸ್-1: 10.2 ಕೆ.ಜಿ. ತೂಕದ ಉಪಗ್ರಹವು ಅಮೆರಿಕದ ‘ಅಂಟಾರಿಸ್’ನದ್ದಾಗಿದೆ.
ಆಜಾದಿಸ್ಯಾಟ್-2: 8.7 ಕೆ.ಜಿ. ತೂಕದ ಉಪಗ್ರಹವು ಭಾರತದ ಸುಮಾರು 750 ವಿದ್ಯಾರ್ಥಿನಿಯರ ಸಂಯೋಜಿತ ಪ್ರಯತ್ನದ ಫಲವಾಗಿದ್ದು, ‘ಸ್ಪೇಸ್ ಕಿಡ್ಜ್ ಇಂಡಿಯಾ’ ಅಭಿವೃದ್ಧಿಪಡಿಸಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.