ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಪರಿಶೀಲನೆ: ಸುಪ್ರೀಂಗೆ ಕೇಂದ್ರ ಮಾಹಿತಿ

Last Updated 19 ಜನವರಿ 2023, 13:48 IST
ಅಕ್ಷರ ಗಾತ್ರ

ನವದೆಹಲಿ: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಬಗ್ಗೆ ಬಿಜೆಪಿ ನಾಯಕ ಹಾಗೂ ರಾಜ್ಯ ಸಭೆ ಮಾಜಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠಕ್ಕೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

‘ಪ್ರಸ್ತುತ ಸಂಸ್ಕೃತಿ ಸಚಿವಾಲಯದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿದಾರರು ಬಯಸಿದರೆ ಹೆಚ್ಚುವರಿ ಮಾಹಿತಿಯನ್ನೂ ಸಲ್ಲಿಸಬಹುದೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಈ ವಿಷಯ ಸಂಬಂಧ ತಾವು ಸರ್ಕಾರದ ಪ್ರತಿನಿಧಿಯಾಗಲು ಬಯಸುತ್ತೀರಾ? ನಿಮ್ಮ ಅಭಿಪ್ರಾಯವೇನು’ ಎಂದು ಪೀಠವು ಅರ್ಜಿದಾರ ಸ್ವಾಮಿ ಅವರನ್ನು ಪ್ರಶ್ನಿಸಿತು.

ಈ ಬಗ್ಗೆ ನಿರ್ಧಾರಕ್ಕೆ ಬರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠವು, ಇದರಲ್ಲಿ ಸ್ವಾಮಿ ಅವರಿಗೆ ಅಸಮಾಧಾನವಿದ್ದರೆ ಮತ್ತು ಅವರ ಮಧ್ಯಂತರ ಅರ್ಜಿ ವಿಲೇವಾರಿ ಮಾಡಿದರೆ ಅವರು ಮುಂದಿನ ಹಂತಕ್ಕೆ ಹೋಗಲು ಸ್ವತಂತ್ರರು ಎಂದು ಹೇಳಿತು. ಮುಂದಿನ ವಿಚಾರಣೆಯನ್ನು ಫೆಬ್ರುವರಿಯಲ್ಲಿ ನಡೆಸುವುದಾಗಿ ಪ್ರಕಟಿಸಿತು.

‘ನಾನು ಯಾರನ್ನೂ ಭೇಟಿಯಾಗಲು ಬಯಸುವುದಿಲ್ಲ. ನಾವು ಒಂದೇ ಪಕ್ಷದಲ್ಲಿದ್ದೇವೆ. ಈ ವಿಷಯ ನಮ್ಮ ಪ್ರಣಾಳಿಕೆಯಲ್ಲಿತ್ತು. ಅವರು ಆರು ವಾರಗಳಲ್ಲಿ ನಿರ್ಧರಿಸಲಿ ಅಥವಾ ಏನಾದರೂ ಮಾಡಲಿ. ನಾನು ಮತ್ತೆ ಬರುತ್ತೇನೆ’ ಎಂದು ಹೇಳಿದ ಸ್ವಾಮಿ ಅವರು ಕಾನೂನು ಸಮರ ಮುಂದುವರಿಸುವ ಮುನ್ಸೂಚನೆ ನೀಡಿದರು.

ವಿಚಾರಣೆ ಆರಂಭದಲ್ಲಿ ಸ್ವಾಮಿ ಅವರು, 2019ರಲ್ಲಿ ಆಗಿನ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ರಾಮಸೇತುವನ್ನು ರಾಷ್ಟ್ರೀಯ ಪಾರಂಪಾರಿಕ ಸ್ಮಾರಕವೆಂದು ಘೋಷಿಸಲು ಶಿಫಾರಸು ಮಾಡಿದ್ದರು. ‘ಸಮಸ್ಯೆಯೆಂದರೆ ಸರ್ಕಾರ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳಬೇಕಾಗಿರುವುದು’ ಎಂದು ಹೇಳಿದರು.

ಇದಕ್ಕೂ ಮೊದಲು ಈ ಅರ್ಜಿ ತ್ರಿಸದ್ಯ ಪೀಠದ ಎದುರು ವಿಚಾರಣೆಗೆ ಬಂದಾಗ ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಈ ವಿಷಯದಲ್ಲಿ ಮೊದಲೇ ವಕೀಲರಾಗಿ ಕಾಣಿಸಿಕೊಂಡಿದ್ದರಿಂದ ವಿಚಾರಣೆಯಿಂದ ಹೊರಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT