ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದವರ ಬಂಧನ– 4 ವರ್ಷಗಳಲ್ಲಿ 5 ಪಟ್ಟು ಹೆಚ್ಚಳ

Published 22 ಆಗಸ್ಟ್ 2023, 15:41 IST
Last Updated 22 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಜಮ್ಮು: ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಇಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ 2,327 ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತ ದತ್ತಾಂಶಗಳು ಬಹಿರಂಗಪಡಿಸಿವೆ.

2015ರಿಂದ 2019ರ ವರೆಗಿನ ನಾಲ್ಕು ವರ್ಷಗಳ ಅವಧಿಗೆ ಹೋಲಿಸಿದರೆ ಇಂತಹ ಬಂಧನಗಳು ಐದು ಪಟ್ಟು ಹೆಚ್ಚಾಗಿವೆ ಎಂಬುದು ಪೊಲೀಸರು ಸಂಗ್ರಹಿಸಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.

ಭದ್ರತಾಪಡೆಗಳ ಯೋಧರು ಮತ್ತು ನಾಗರಿಕರ ಸಾವು–ನೋವುಗಳು, ಗ್ರೆನೇಡ್‌ ದಾಳಿಗಳು, ಕಚ್ಚಾ ಬಾಂಬ್‌ ಸ್ಫೋಟಗಳು, ಉಗ್ರರ ನೇಮಕಾತಿ ಮೊದಲಾದ ವಿಚಾರಗಳನ್ನು ಪರಿಶೀಲಿಸಿದರೆ,  2019 ಆಗಸ್ಟ್‌ 5ರಿಂದ 2023ರ ಜೂನ್‌ 20ರ ನಡುವೆ ಇಲ್ಲಿನ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ.

ಭಯೋತ್ಪಾದಕರ ನೇಮಕಾತಿಯಲ್ಲಿ ಶೇ23ರಷ್ಟು ಇಳಿಕೆಯಾಗಿದೆ. 2015ರಿಂದ 2019ರ ನಡುವೆ 597 ಮಂದಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದರೆ, 2019ರಿಂದ 2023ರ ನಡುವೆ 461 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ವಿರುದ್ಧದ ಪರಿಣಾಮಕಾರಿ ಕಾರ್ಯಾಚರಣೆ, ಗುಪ್ತಚರ ಇಲಾಖೆಯ ಮಾಹಿತಿ ಸಂಗ್ರಹಣೆಯಲ್ಲಿನ ಸುಧಾರಣೆಯು ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಲು ಕಾರಣವಾಗಿದೆ ಎಂದಿದ್ದಾರೆ.

2019ರ ಆಗಸ್ಟ್‌ 5ರಿಂದ 2023ರ ಜೂನ್‌ ನಡುವೆ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 675 ಮಂದಿ ಉಗ್ರರು ಹತರಾಗಿದ್ದಾರೆ. 2015ರಿಂದ 2019ರ ನಡುವೆ 740 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

2015ರಿಂದ 2019ರ ನಡುವೆ ಪೊಲೀಸ್‌ ಮತ್ತು ಭದ್ರತಾ ಪಡೆಯ 329 ಸಿಬ್ಬಂದಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದರು. 2019 ಆಗಸ್ಟ್‌ 5ರ ನಂತರ 146 ಮಂದಿ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT