ಶ್ರೀನಗರ: ಮುಂದಿನ ತಿಂಗಳು ನಡೆಯಲಿರುವ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗೆ ಡಿ.ಎಚ್.ಪೋರಾ ಕ್ಷೇತ್ರದಿಂದ ನ್ಯಾಷನಲ್ ಕಾನ್ಫರೆನ್ಸ್ ನಾಯಕಿ, ಮಾಜಿ ಸಚಿವೆ ಸಕಿನಾ ಇಟ್ಟೂ ನಾಮಪತ್ರ ಸಲ್ಲಿಸಿದ್ದಾರೆ.
ಕುಲ್ಗಾಮ್‌ನ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರಿಗೆ ಇಟ್ಟೂ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಇತರ ನಾಯಕರು ಜೊತೆಗಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ‘ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಅನುಮತಿ ಮೇರೆಗೆ, ಹಿರಿಯ ನಾಯಕಿ ಸಕಿನಾ ಇಟ್ಟೂ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸಕಿನಾ ಅವರ ಯಶಸ್ಸಿನ ಜೊತೆಗೆ, ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಎಲ್ಲ ಅಭ್ಯರ್ಥಿಗಳು ಜಯಗಳಿಸುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷವು ತನ್ನ ಪ್ರಣಾಳಿಕೆಯನ್ನು ಜನರ ಮುಂದೆ ಇರಿಸಿದೆ. ‘ಬಹುಶಃ ಮುಂದಿನ ಐದು ವರ್ಷಗಳವರೆಗೆ ಯಾವುದೇ ಪಕ್ಷವು ಉತ್ತಮ ಪ್ರಣಾಳಿಕೆ, ಕಾರ್ಯಕ್ರಮ ಅಥವಾ ಕಾರ್ಯಸೂಚಿಯನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ’ ಎಂದು ಅಬ್ದುಲ್ಲಾ ತಿಳಿಸಿದರು.
ಮುಂದಿನ ಐದು ವರ್ಷಗಳ ಕಾಲ ಯಾವ ಸರ್ಕಾರ ಇರಬೇಕೆಂಬುದನ್ನು ಜಮ್ಮು ಮತ್ತು ಕಾಶ್ಮೀರದ ಜನರು ನಿರ್ಧರಿಸುತ್ತಾರೆ. ಜನರ ಸೇವೆ ಮಾಡಲು ಪಕ್ಷಕ್ಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.
ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿದೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಟ್ಟು 90 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.