ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾದವಪುರ ವಿವಿ ವಿದ್ಯಾರ್ಥಿ ಆತ್ಮಹತ್ಯೆಗೆ ರ‍್ಯಾಗಿಂಗ್ ಕಾರಣ: ‍ಕೋಲ್ಕತ್ತ ಪೊಲೀಸ್

Published 23 ಆಗಸ್ಟ್ 2023, 3:31 IST
Last Updated 23 ಆಗಸ್ಟ್ 2023, 3:31 IST
ಅಕ್ಷರ ಗಾತ್ರ

ಕೋಲ್ಕತ್ತ: ಹಾಸ್ಟೆಲ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಜಾದವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರ‍್ಯಾಗಿಂಗ್‌ ಮಾಡಿ, ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದು ಕೋಲ್ಕತ್ತ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯು, ಆಗಸ್ಟ್‌ 9ರ ರಾತ್ರಿ ಹಾಸ್ಟೆಲ್‌ ಕಟ್ಟಡದ ಎರಡನೇ ಅಂತಸ್ತಿನಿಂದ ಜಿಗಿದು ಮೃತಪಟ್ಟಿದ್ದ. ಈ ಘಟನೆ ನಡೆಯುವುದಕ್ಕೆ ಕೆಲಹೊತ್ತಿನ ಮೊದಲು, ಆತನನ್ನು ಹಾಸ್ಟೆಲ್‌ ಕಾರಿಡಾರ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ನಡೆಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಿವಿಯ ಹಳೇ ವಿದ್ಯಾರ್ಥಿಗಳೂ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ.

'ವಿದ್ಯಾರ್ಥಿಗೆ ಖಂಡಿತವಾಗಿಯೂ ಲೈಂಗಿಕ ಕಿರುಕುಳ ನೀಡಿ, ರ‍್ಯಾಗಿಂಗ್‌ ಮಾಡಲಾಗಿದೆ. ಆತನನ್ನು ಕೊಠಡಿ ಸಂಖ್ಯೆ 70ರಲ್ಲಿ ಬಲವಂತವಾಗಿ ವಿವಸ್ತ್ರಗೊಳಿಸಿ, ಹಾಸ್ಟೆಲ್‌ ಕಾರಿಡಾರ್‌ನಲ್ಲಿ ಮೆರವಣಿಗೆ ನಡೆಸಲಾಗಿದೆ. ಇದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಬಂಧಿತರಲ್ಲಿ 12 ಮಂದಿ ಇಡೀ ಪ್ರಕರಣದಲ್ಲಿ ಪಾತ್ರ ವಹಿಸಿದ್ದಾರೆ' ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಹಾಸ್ಟೆಲ್‌ ಗ್ರೂಪ್‌ ರಚಿಸಿದ್ದವನೂ ಬಂಧಿತರ ಪಟ್ಟಿಯಲ್ಲಿದ್ದಾನೆ. ಆತ, ರ‍್ಯಾಗಿಂಗ್‌ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಅಂಶಗಳನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಳಿಸಿಹಾಕಿದ್ದ. ಆ ಮೂಲಕ ಪೊಲೀಸರನ್ನು ಯಾಮಾರಿಸಲು ಯತ್ನಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ ಎಂದೂ ಹೇಳಿದ್ದಾರೆ.

ಬಂಧಿತರ ವಿರುದ್ಧ 'ಪಶ್ಚಿಮ ಬಂಗಾಳ ಶೈಕ್ಷಣಿಕ ಸಂಸ್ಥೆಗಳಲ್ಲಿ ರ‍್ಯಾಗಿಂಗ್‌ ಅನ್ನು ನಿರ್ಬಂಧಿಸುವ ಕಾಯ್ದೆ-2000' ಅಡಿಯಲ್ಲಿ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ತನಿಖಾ ತಂಡ ಮಾಡಿದ್ದ ಮನವಿಯನ್ನು ಸ್ಥಳೀಯ ನ್ಯಾಯಾಲಯ ಮಾನ್ಯ ಮಾಡಿದೆ.

ಪ್ರಕರಣ ಸಂಬಂಧ ಹಾಸ್ಟೆಲ್‌ನ ಅಡುಗೆ ಸಿಬ್ಬಂದಿಯನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಇಬ್ಬರು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT