ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸೀದಿ ಪ್ರವೇಶಕ್ಕೆ ಯುವತಿಯರಿಗೆ ನಿರ್ಬಂಧ: ಆದೇಶ ಹಿಂಪಡೆದ ಜಾಮಾ ಮಸೀದಿ

Published : 24 ನವೆಂಬರ್ 2022, 16:46 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಯುವತಿಯರು ಮಸೀದಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಜಾಮಾ ಮಸೀದಿ ಆಡಳಿತವು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರ ಮನವಿಯ ಬಳಿಕ ತನ್ನ ಆದೇಶ ಹಿಂಪಡೆದಿದೆ.

‘ಲೆಫ್ಟಿನೆಂಟ್‌ ಗವರ್ನರ್‌ ಅವರು ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ನಮ್ಮ ನಿರ್ಧಾರ ಬದಲಿಸಿದ್ದೇವೆ. ಮಸೀದಿಗೆ ಭೇಟಿ ನೀಡುವವರು ಪಾವಿತ್ರ್ಯತೆ ಕಾಪಾಡಬೇಕು’ ಎಂದು ಮಸೀದಿಯ ಶಾಹಿ ಇಮಾಮ್‌ ಸೈಯದ್ ಅಹ್ಮದ್‌ ಬುಖಾರಿ ಗುರುವಾರ ಹೇಳಿದ್ದಾರೆ.

ಯುವತಿ ಅಥವಾ ಯುವತಿಯರ ಗುಂಪು ಮಸೀದಿ ಪ್ರವೇಶಿಸುವುದನ್ನು ನಿಷೇಧಿಸಿರುವುದಾಗಿ ಮಸೀದಿಯ ಮುಖ್ಯದ್ವಾರಗಳ ಮೇಲೆ ಸೂಚನಾ ಫಲಕ ಹಾಕಲಾಗಿತ್ತು. ಮಸೀದಿ ಆಡಳಿತದ ಈ ನಿರ್ಧಾರಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

ವಿವಾದದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿದ್ದ ಬುಖಾರಿ, ‘ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬರುವವರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಮಸೀದಿಯ ಆವರಣದಲ್ಲಿ ಯುವತಿಯರು ರೀಲ್ಸ್‌, ಟಿಕ್‌ಟಾಕ್‌ ವಿಡಿಯೊ ಮಾಡುತ್ತಿದ್ದ ಕುರಿತು ವರದಿಗಳಾಗಿತ್ತು. ಹೀಗಾಗಿ ಈ ನಿರ್ಧಾರ ತೆಗದುಕೊಳ್ಳಲಾಗಿದೆ. ಮಸೀದಿಯು ಪ್ರಾರ್ಥನಾ ಸ್ಥಳ. ಅದಕ್ಕಾಗಿ ಬರುವವರಿಗೆ ಯಾವ ನಿರ್ಬಂಧವೂ ಇಲ್ಲ. ಆದರೆ ತಮ್ಮ ಸಂಗಾತಿಯ ಭೇಟಿಗಾಗಿ ಬಂದು ಕಾಯುವವರಿಗೆ ಪ್ರವೇಶವಿಲ್ಲ’ ಎಂದು ಹೇಳಿದ್ದರು.

ಮಸೀದಿಯ ನಿರ್ಧಾರ ವಿರೋಧಿಸಿದ್ದ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಾಲಿವಾಲ್‌, ಈ ಕ್ರಮ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸಲಿದೆ’ ಎಂದಿದ್ದರು. ಈ ಸಂಬಂಧ ಮಸೀದಿ ಆಡಳಿತಕ್ಕೆ ನೋಟಿಸ್‌ ನೀಡಿರುವುದಾಗಿ ತಿಳಿಸಿದ್ದರು.

ಅಸಾಂವಿಧಾನಿಕ ನಡೆ: ಮಸೀದಿ ಆಡಳಿತದ ನಡೆಯನ್ನು ಮಹಿಳಾ ವಿರೋಧಿ ಮತ್ತು ಅಸಾಂವಿಧಾನಿಕ ಎಂದು ಟೀಕಿಸಿದ್ದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT