ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹32 ಕೋಟಿ ಪತ್ತೆ: ಪ್ರಭಾವಿಗಳ ಪರವಾಗಿ ಕಮಿಷನ್ ಸಂಗ್ರಹಿಸುವ ಲಾಲ್: ಇ.ಡಿ ಆರೋಪ

Published 7 ಮೇ 2024, 12:40 IST
Last Updated 7 ಮೇ 2024, 12:40 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಜಾರ್ಖಂಡ್‌ನ ಸಚಿವ ಆಲಂಗೀರ್ ಆಲಂ ಅವರ ಕಾರ್ಯದರ್ಶಿಯು ಟೆಂಡರ್‌ಗಳಿಗೆ ಸಂಬಂಧಿಸಿದಂತೆ ‘ಕೆಲವು ಪ್ರಭಾವಿಗಳ ಪರವಾಗಿ’ ಕಮಿಷನ್ ಪಡೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿನ ನ್ಯಾಯಾಲಯವೊಂದಕ್ಕೆ ಮಂಗಳವಾರ ತಿಳಿಸಿದೆ.

ಆಲಂಗೀರ್ ಆಲಂ ಅವರ ಇಲಾಖೆಯ (ಗ್ರಾಮೀಣಾಭಿವೃದ್ಧಿ) ಅಧಿಕಾರಿಗಳು ‘ಅಡಿಯಿಂದ ಮುಡಿಯವರೆಗೆ’ ಅಕ್ರಮ ಹಣ ಪಾವತಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಇ.ಡಿ. ಆರೋಪಿಸಿದೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯ ಫ್ಲ್ಯಾಟ್‌ ಒಂದರಲ್ಲಿ ನಡೆಸಿದ ಶೋಧದಲ್ಲಿ ₹32.20 ಕೋಟಿ ನಗದು ದೊರೆತ ನಂತರದಲ್ಲಿ ಸಂಜೀವ್ ಕುಮಾರ್ ಲಾಲ್ ಮತ್ತು ಅವರ ಮನೆಗೆಲಸದ ಜಹಾಂಗೀರ್ ಆಲಂ ಎನ್ನುವವರನ್ನು ಇ.ಡಿ ಬಂಧಿಸಿದೆ. ಲಾಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಅವರ ಕಾರ್ಯದರ್ಶಿ. ಲಾಲ್ ಮತ್ತು ಜಹಾಂಗೀರ್ ಆಲಂ ಅವರನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಕುರಿತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಇಬ್ಬರನ್ನೂ ಆರು ದಿನಗಳವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಅಧಿಕಾರಿಗಳು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇ.ಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿರುವ ಹಣದ ಒಟ್ಟು ಮೊತ್ತವು ₹36.75 ಕೋಟಿ.

ಆದರೆ ಲಾಲ್ ಅವರ ವಹಿವಾಟುಗಳಿಗೂ ತಮಗೂ ಸಂಬಂಧ ಇಲ್ಲ ಎಂದು ಆಲಂಗೀರ್ ಆಲಂ ಹೇಳಿದ್ದಾರೆ. ಲಾಲ್ ಅವರು ಸರ್ಕಾರದ ಇತರ ಸಚಿವರ ಜೊತೆಯೂ ಈ ಹಿಂದೆ ಕೆಲಸ ಮಾಡಿದ್ದಾರೆ ಎಂದು ಆಲಂಗೀರ್ ಆಲಂ ತಿಳಿಸಿದ್ದಾರೆ. ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಇ.ಡಿ. ಮುಟ್ಟುಗೋಲು ಹಾಕಿಕೊಂಡಿರುವ ಈ ಹಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಇ.ಡಿ. ಕ್ರಮವು ತಮ್ಮ ನಾಯಕರ ಮೇಲಿನ ದೌರ್ಜನ್ಯ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

‘ಸಂಜೀವ್ ಲಾಲ್ ಅವರು ಕೆಲವು ಪ್ರಭಾವಿಗಳ ಪರವಾಗಿ ಕಮಿಷನ್ ಸಂಗ್ರಹಿಸುವ ಹೊಣೆ ಹೊತ್ತಿದ್ದಾರೆ. ಅಲ್ಲದೆ, ಟೆಂಡರ್‌ಗಳ ನಿರ್ವಹಣೆ ಹಾಗೂ ಎಂಜಿನಿಯರ್‌ಗಳಿಂದ ಕಮಿಷನ್‌ ಸಂಗ್ರಹಿಸುವ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಕಮಿಷನ್‌ ಪಾಲನ್ನು ಸರ್ಕಾರದಲ್ಲಿ ದೊಡ್ಡವರಿಗೆ ತಲುಪಿಸಲಾಗುತ್ತದೆ’ ಎಂದು ಇ.ಡಿ. ನ್ಯಾಯಾಲಯಕ್ಕೆ ತಿಳಿಸಿದೆ.

ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹೆಸರು ಕೇಳಿಬಂದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅದು ಮಾಹಿತಿ ನೀಡಿದೆ. ‘ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಡಿಯಿಂದ ಮುಡಿಯವರೆಗೆ ಹಲವು ಅಧಿಕಾರಿಗಳು ಈ ಕೂಟದಲ್ಲಿ ಶಾಮೀಲಾಗಿದ್ದಾರೆ, ಭಾರಿ ಮೊತ್ತದ ಪಾವತಿಗಳನ್ನು ಸಾಮಾನ್ಯವಾಗಿ ನಗದು ರೂಪದಲ್ಲಿ ಮಾಡಲಾಗುತ್ತದೆ. ಆ ಮೊತ್ತವನ್ನು ನಂತರ ಅಕ್ರಮವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದನ್ನು ಪತ್ತೆ ಮಾಡಬೇಕಿದೆ’ ಎಂದು ಅದು ತಿಳಿಸಿದೆ.

ಲಾಲ್ ಮತ್ತು ಜಹಾಂಗೀರ್ ಆಲಂ ಅವರು ಕ್ರಿಮಿನಲ್ ಚಟುವಟಿಕೆಗಳ ಮೂಲಕ ಅಕ್ರಮ ಹಣ ಸಂಗ್ರಹಿಸಿದ್ದಾರೆ. ಆ ಹಣವನ್ನು ಅವರು ಬೇರೆ ಬೇರೆ ಕಡೆ ಬಚ್ಚಿಟ್ಟಿದ್ದಾರೆ ಎಂದು ಇ.ಡಿ. ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT