ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಧೀಶರು ವಾಹಿನಿಗಳಿಗೆ ಸಂದರ್ಶನ ನೀಡುವುದು ಸಲ್ಲ: ಸುಪ್ರೀಂ ಕೋರ್ಟ್

Published 24 ಏಪ್ರಿಲ್ 2023, 18:46 IST
Last Updated 24 ಏಪ್ರಿಲ್ 2023, 18:46 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಾಧೀಶರು ತಮ್ಮ ಬಳಿ ಬಾಕಿ ಇರುವ ಪ್ರಕರಣಗಳ ಕುರಿತು ಯಾವುದೇ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುವುದು ಸಲ್ಲದು’ ಎಂದು  ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಶಾಲೆಗಳಲ್ಲಿನ ಉದ್ಯೋಗಕ್ಕೆ ಸಂಬಂಧಿಸಿದ ಹಗರಣವೊಂದರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಕ್ಕಾಗಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಸಂದರ್ಶನ ನೀಡುವ ಸಂದರ್ಭದಲ್ಲಿ ಬ್ಯಾನರ್ಜಿ ಅವರ ಪ್ರಕರಣವನ್ನು ನ್ಯಾಯಮೂರ್ತಿಗಳು ವಿಚಾರಣೆಗೆ ತೆಗೆದುಕೊಂಡಿದ್ದರು.  ‘ನ್ಯಾಯಾಧೀಶರು ತಮ್ಮ ಮುಂದೆ ಬಾಕಿ ಇರುವ ಪ್ರಕರಣಗಳ ಕುರಿತು ದೂರದರ್ಶನ ಅಥವಾ ಯಾವುದೇ ವಾಹಿನಿಗಳಿಗೆ ಸಂದರ್ಶನ ನೀಡುವಂತಿಲ್ಲ’ ಎಂದು ಪೀಠ ಹೇಳಿದೆ.

ಬ್ಯಾನರ್ಜಿ ಪರ ಅವರ ವಕೀಲರು ಸಲ್ಲಿಸಿದ್ದ ಮನವಿಯನ್ನು ಕೈಗೆತ್ತಿಕೊಂಡ ಪೀಠವು, ‘ನ್ಯಾಯಾಧೀಶರು ಹೇಗೆ ಸಂದರ್ಶನ ನೀಡಲು ಸಾಧ್ಯ’ ಎಂದೂ ಪ್ರಶ್ನಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನಿಂದ ವರದಿಯನ್ನು ಕೇಳಿರುವ ನ್ಯಾಯಪೀಠವು, ನ್ಯಾಯಾಧೀಶರನ್ನು ಸಂದರ್ಶನ ಮಾಡಲಾಗಿದೆಯೇ ಎಂಬುದನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಸ್ಪಷ್ಪನೆ ನೀಡಲು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿತು. ಈ ಸಂಬಂಧ ಶುಕ್ರವಾರದೊಳಗೆ ಅಫಿಡವಿಟ್ ಸಲ್ಲಿಸಲು ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ.

ತನಿಖಾ ಸಂಸ್ಥೆಗಳ ಪರ ಹಾಜರಿದ್ದ ಅಡಿಷನ್ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ‘ಈಗ ನಡೆಯುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸಲು ಸಂದರ್ಶನವು ಕಾರಣವಾಗಬಹುದು’ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಆಪಾದಿತ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಗೆ ತನ್ನ ಆದೇಶವು ಅಡ್ಡಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT