ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ | ಕಾಂಗ್ರೆಸ್‌ನ 66 ಶಾಸಕರಲ್ಲಿ 12 ಜನ ತನ್ನೊಂದಿಗೆ: ಕಮಲನಾಥ್

Published : 17 ಫೆಬ್ರುವರಿ 2024, 14:38 IST
Last Updated : 17 ಫೆಬ್ರುವರಿ 2024, 14:38 IST
ಫಾಲೋ ಮಾಡಿ
Comments

ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್‌ ಮತ್ತು ಸಂಸದರಾದ ಅವರ ಪುತ್ರ ನಕುಲ್‌ನಾಥ್‌ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ.

ಕಮಲ್‌ನಾಥ್‌ ಅವರು ಶನಿವಾರ ನವದೆಹಲಿಗೆ ಬಂ‌ದಿರುವುದು ಹಾಗೂ ನಕುಲ್‌ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕಾಂಗ್ರೆಸ್‌ ಉಲ್ಲೇಖವನ್ನು ಕೈಬಿಟ್ಟಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

ಕಾಂಗ್ರೆಸ್‌ನ 66 ಮಂದಿ ಶಾಸಕರಲ್ಲಿ ಕನಿಷ್ಠ 12 ಮಂದಿ ತಮ್ಮ ಜೊತೆಗಿದ್ದಾರೆ ಎಂದು ಕಮಲ್‌ನಾಥ್‌ ಅವರು ಹೇಳಿದ್ದಾರೆ.

ಒಂದು ವೇಳೆ ಕಮಲ್‌ನಾಥ್‌ ಅವರು ಬಿಜೆಪಿಗೆ ಸೇರ್ಪಡೆಗೊಂಡರೆ, ಒಂದು ತಿಂಗಳಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ ಎರಡನೇ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅ‌ಶೋಕ್‌ ಚವ್ಹಾಣ್‌ ಅವರು ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದು ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ.

ಬಿಜೆಪಿಗೆ ಸೇರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್‌ನಾಥ್‌, ‘ಹಾಗೇನಾದರೂ ಇದ್ದರೆ ನಾನು ಮೊದಲು ನಿಮಗೆ (ಮಾಧ್ಯಮದವರಿಗೆ) ತಿಳಿಸುತ್ತೇನೆ’ ಎಂದರು.

ಕಮಲ್‌ನಾಥ್‌ ಅವರು ಬಿಜೆಪಿಗೆ ಸೇರುತ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್‌ ಬಗ್ಗಾ ಅವರು ಎ‌ಕ್ಸ್‌ ಮಾಧ್ಯಮದಲ್ಲಿ ಹೇಳಿದ್ದಾರೆ.

‘ಕಮಲ್‌ನಾಥ್‌ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಆಧಾರ ರಹಿತವಾದುದು’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಿತು ಪಟ್ವಾರಿ ತಿಳಿಸಿದ್ದಾರೆ.‌

ಕಮಲ್‌ನಾಥ್‌ ಅವರು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಇಂದಿರಾ ಗಾಂಧಿ ಅವರು, ಕಮಲ್‌ನಾಥ್‌ ನನ್ನ ಮೂರನೇ ಮಗನಿದ್ದಂತೆ ಎಂದು ಹೇಳಿದ್ದರು. ಇಂದಿರಾ ಗಾಂಧಿ ಅವರ ಮೂರನೇ ಮಗ ಕಾಂಗ್ರೆಸ್‌ ತೊರೆಯುತ್ತಾರೆಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಮಲ್‌ನಾಥ್‌ ಅವರೊಂದಿಗೆ ನಾನು ಮಾತನಾಡಿದ್ದೇನೆ. ನೆಹರೂ–ಗಾಂಧಿ ಕುಟುಂಬದ ಜೊತೆಗೆ ರಾಜಕೀಯ ಪಯಣ ಆರಂಭಿಸಿರುವ ಅವರು ಪಕ್ಷ ಬಿಡಲು ಸಾಧ್ಯವೇ?’ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ಕಮಲ್‌ನಾಥ್‌ ಮೇಲೆ ಪಕ್ಷದ ನಾಯಕತ್ವ ಅಸಮಾಧಾನಗೊಂಡಿತ್ತು. ಸೋಲಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗಿತ್ತು.

ಚುನಾವಣೆಯ ವೇಳೆ, ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್‌ ಕನುಗೋಲು ಅವರ ತಂಡವನ್ನು ದೂರವಿರಿಸಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು.

2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಆಪ್ತ ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ‌ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಅವರ ಸರ್ಕಾರ ಪತನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT