ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶ್ಮೀರ ಸೊಬಗು ಸವಿಯಲು ಪ್ರವಾಸಿಗರ ಸಂಖ್ಯೆ ಹೆಚ್ಚಳ: ಮೂಲಸೌಕರ್ಯಕ್ಕೆ ಒತ್ತಡ

Published 26 ಮೇ 2024, 13:10 IST
Last Updated 26 ಮೇ 2024, 13:10 IST
ಅಕ್ಷರ ಗಾತ್ರ

ಶ್ರೀನಗರ: ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಿದೆ. ಸುರಕ್ಷತೆಯ ಭಾವನೆಯೂ ಹೆಚ್ಚುತ್ತಿರುವ ಕಾರಣ, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಧಾವಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿದೆ.

ದೇಶದ ವಿವಿಧ ರಾಜ್ಯಗಳಿಂದಲ್ಲದೇ, ವಿದೇಶಗಳ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶುದ್ಧ ನೀರಿನಿಂದ ಕಣ್ಮನ ಸೆಳೆಯುವ ದಾಲ್‌ ಲೇಕ್‌, ಹಿಮಚ್ಛಾದಿತ ಗುಲ್ಮಾರ್ಗ್‌ನ ಬೆಟ್ಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಪ್ರವಾಸೋದ್ಯಮಕ್ಕೆ ಇಂಬು ಸಿಕ್ಕಿದ್ದರೂ, ಪ್ರವಾಸಿಗರ ಸಂಖ್ಯೆಯಲ್ಲಾದ ಹೆಚ್ಚಳದಿಂದಾಗಿ ಇಲ್ಲಿನ ಮೂಲಸೌಕರ್ಯಗಳ ಮೇಲೆ ಒತ್ತಡ ಬೀಳುತ್ತಿದೆ. ಅವುಗಳ ಧಾರಣಾ ಸಾಮರ್ಥ್ಯಕ್ಕೂ ಇದು ಸವಾಲಾಗಿ ಪರಿಣಮಿಸಿದೆ.

ಗುಲ್ಮಾರ್ಗ್‌, ಪಹಲ್ಗಾಮ್‌ ಹಾಗೂ ಸೋನಮಾರ್ಗದಂತಹ ಗಿರಿಧಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಈಗ ಭಾರಿ ಸಂಖ್ಯೆಯಲ್ಲಿ ವಾಹನಗಳನ್ನು ಕಾಣಬಹುದಾಗಿದೆ. ಈ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಈ ವಾಹನಗಳು ತುಂಬಿರುತ್ತವೆ.

ಆದರೆ, ಈ ಎಲ್ಲ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಇಲ್ಲಿರುವ ಸಣ್ಣ ಪ್ರಮಾಣದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿರುವ ಹೋಟೆಲ್‌ಗಳು, ಗೆಸ್ಟ್‌ಹೌಸ್‌ಗಳನ್ನು ಸಹ ಒಂದು ಕಾಲದಲ್ಲಿ ಇಲ್ಲಿಗೆ ಬರುವ ಕಡಿಮೆ ಸಂಖ್ಯೆಯ ಪ್ರವಾಸಿಗರಿಗೆ ಸಾಕಾಗುವಂತೆ ನಿರ್ಮಿಸಲಾಗಿದೆ. ಈಗ, ಪ್ರವಾಸಿಗರ ಸಂಖ್ಯೆಯಲ್ಲಿನ ದಿಢೀರ್‌ ಹೆಚ್ಚಳ ಈ ಎಲ್ಲ ಮೂಲಸೌಕರ್ಯಗಳ ಮೇಲೆ ಒತ್ತಡಕ್ಕೆ ಕಾರಣವಾಗಿದೆ.

ಕೆಲವೆಡೆ ತಾತ್ಕಾಲಿಕ ಲಾಡ್ಜಿಂಗ್‌ಗಳನ್ನು ನಿರ್ಮಿಸಲಾಗಿದ್ದರೂ, ಅವುಗಳಲ್ಲಿ ಮೂಲಸೌಲಭ್ಯಗಳು ಇಲ್ಲ. ಇದು ಒಂದೆಡೆ ಪ್ರವಾಸಿಗರು ತೊಂದರೆ ಅನುಭವಿಸುವಂತೆ ಮಾಡಿದರೆ, ಮತ್ತೊಂದೆಡೆ ಅವರಲ್ಲಿ ಕಣಿವೆ ರಾಜ್ಯದ ಪ್ರವಾಸ ಕೆಟ್ಟ ಅನುಭವ ಮೂಡಿಸುವ ಸಾಧ್ಯತೆ ಇರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

‘ಕೆಲ ವರ್ಷಗಳ ಹಿಂದೆ ರಾಜಕೀಯ ಅಸ್ಥಿರತೆ ಪರಿಣಾಮ ಹೌಸ್‌ಬೋಟ್‌ಗಳ ಮಾಲೀಕರು ಕಷ್ಟ ಅನುಭವಿಸುತ್ತಿದ್ದರು. ಈಗ ಸುರಕ್ಷತೆ ಹೆಚ್ಚಿರುವ ಕಾರಣ ಹೌಸ್‌ಬೋಟ್‌ಗಳು ಪ್ರವಾಸಿಗರಿಂದ ತುಂಬುತ್ತಿವೆ. ಈ ಪರಿಯ ಪ್ರವಾಸಿಗರ ದಟ್ಟಣೆಯನ್ನು ನಾನು ನೋಡಿಯೇ ಇರಲಿಲ್ಲ’ ಎಂದು ಹೌಸ್‌ಬೋಟ್‌ವೊಂದರ ಮಾಲೀಕ ಶಹೀದ್‌ ಅಹ್ಮದ್‌ ಹೇಳುತ್ತಾರೆ.

‘ಇತ್ತೀಚಿನ ದಿನಗಳಲ್ಲಿ ಹಲವು ತಿಂಗಳು ಮೊದಲೇ ಹೋಟೆಲ್‌ಗಳಲ್ಲಿ ಬುಕಿಂಗ್ ಆರಂಭವಾಗಿರುತ್ತದೆ. ಎಷ್ಟೋ ಜನ ಪ್ರವಾಸಿಗರನ್ನು ವಾಪಸು ಕಳುಹಿಸಿದ್ದೇವೆ. ಸಾಕಷ್ಟು ಕಷ್ಟದ ದಿನಗಳನ್ನು ಅನುಭವಿಸಿದ ನಂತರ ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ಒಳ್ಳೆಯದೇ’ ಎಂದು ಗುಲ್ಮಾರ್ಗ್‌ನ ಪ್ರಮುಖ ಹೋಟೆಲ್‌ನ ವ್ಯವಸ್ಥಾಪಕರಾಗಿರುವ ತಾರಿಕ್‌ ದರ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT