ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್ ವರದಿಗೆ ಮತ್ತೆ ಅಡ್ಡಿ

ಪಶ್ಚಿಮಘಟ್ಟ ಸಂರಕ್ಷಣೆ ಕರಡು ಅಧಿಸೂಚನೆ 3ನೇ ಬಾರಿಯೂ ರದ್ದು
Last Updated 26 ಆಗಸ್ಟ್ 2018, 19:29 IST
ಅಕ್ಷರ ಗಾತ್ರ

ನವದೆಹಲಿ: ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ. ಕಸ್ತೂರಿ ರಂಗನ್‌ ಸಮಿತಿಯ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ಕರ್ನಾಟಕದ ವಿರೋಧದಿಂದಾಗಿ ಮತ್ತೊಮ್ಮೆ ರದ್ದಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಇದೇ 26 (ಭಾನುವಾರ) ಕೊನೆಯ ದಿನವಾಗಿತ್ತು. ಈ ಬಾರಿಯೂ ಕರ್ನಾಟಕ ವಿರೋಧ ವ್ಯಕ್ತಪಡಿಸಿದ ಕಾರಣ ಮೂರನೇ ಬಾರಿಗೆ ಅಧಿಸೂಚನೆ ರದ್ದಾಗಿದೆ.

ನಾಲ್ಕನೇ ಅಧಿಸೂಚನೆ ಹೊರಡಿಸಲು ಕೇಂದ್ರ ಸಿದ್ಧತೆ ನಡೆಸಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಧಿಸೂಚನೆಯಲ್ಲಿ ಗುರುತಿಸಲಾದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶವನ್ನು (ಇಎಸ್‌ಎ) ಕಡಿತಗೊಳಿಸುವಂತೆ ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಪಟ್ಟು ಹಿಡಿದಿರುವುದು ವರದಿ ಅನುಷ್ಠಾನಕ್ಕೆ ತೊಡಕಾಗಿ ಪರಿಣಮಿಸಿದೆ.

2017ರಲ್ಲಿ ಹೊರಡಿಸಲಾದ ಮೂರನೇ ಅಧಿಸೂಚನೆ ಕುರಿತು ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಹೊಸದಾಗಿ ಆಕ್ಷೇಪಣೆ ಸಲ್ಲಿಸಿತ್ತು.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವನ್ನು ಉಳಿಸುವ ಉದ್ದೇಶದಿಂದ ರೂಪಿಸಲಾದ ಕಾನೂನು ವ್ಯಾಪ್ತಿಯಿಂದ ಹೊರಗುಳಿಯಲು ಕರ್ನಾಟಕ ಯತ್ನಿಸುತ್ತಿದೆ ಎಂದು ಕೇಂದ್ರ ಆರೋಪಿಸಿದೆ.

ಪಶ್ಚಿಮಘಟ್ಟ ಪ್ರದೇಶ ಹೆಚ್ಚಿನ ಭಾಗ ಹರಡಿಕೊಂಡಿರುವ ಕರ್ನಾಟಕವನ್ನು ಹೊರಗಿಟ್ಟು ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಅಸಾಧ್ಯ ಎನ್ನುವ ವಾಸ್ತವ ಸಂಗತಿ ಕೇಂದ್ರ ಸರ್ಕಾರದ ಕೈ ಕಟ್ಟಿ ಹಾಕಿದೆ.

ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಗಳು ಇದೇ ಏಪ್ರಿಲ್‌ನಲ್ಲಿ ಗುಜರಾತ್‌, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳ ಜತೆ ಸಭೆ ನಡೆಸಿ ಮನವೊಲಿಕೆಗೆ ಮುಂದಾಗಿದ್ದರು.

ಕರ್ನಾಟಕ ವಿಧಾನಸಭೆಯ ಚುನಾವಣೆ ಬಳಿಕ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ತನ್ನ ನಿಲುವನ್ನು ಪುನರ್‌ ಪರಿಶೀಲಿಸಬಹುದು ಎಂಬ ಆಶಯವನ್ನು ಕೇಂದ್ರ ಹೊಂದಿತ್ತು. ಆದರೆ, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ ವರದಿ ಶಿಫಾರಸು ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದೆ.

ಕಸ್ತೂರಿರಂಗನ್‌ ಸಮಿತಿ ವರದಿ ಆಧರಿಸಿ ರೂಪಿಸಲಾಗಿರುವ ಅಧಿಸೂಚನೆಗೆ ಈ ಮೊದಲು ತಮಿಳುನಾಡು ಕೂಡ ಪ್ರಬಲ ವಿರೋಧ ವ್ಯಕ್ತಪಡಿತ್ತು.

ತಮಿಳುನಾಡು ಸರ್ಕಾರ ಮೂರು ವರ್ಷದಿಂದ ವಸ್ತುಸ್ಥಿತಿ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಇದರಿಂದ ಕರಡು ಅಂತಿಮಗೊಳಿಸುವ ಕಾರ್ಯ ವಿಳಂಬವಾಗಿತ್ತು. ಕಳೆದ ವರ್ಷವಷ್ಟೇ(2017) ತಮಿಳುನಾಡು ವಸ್ತುಸ್ಥಿತಿ ವರದಿ ಸಲ್ಲಿಸಿದೆ.

***

* ಆಕ್ಷೇಪಣೆ ಸಲ್ಲಿಸಲು 545 ದಿನಗಳ ಕಾಲಾವಧಿ ಭಾನುವಾರ ಕೊನೆ

* ನಾಲ್ಕನೇ ಅಧಿಸೂಚನೆ ಹೊರಡಿಸಲು ಕೇಂದ್ರ ಸಜ್ಜು

* ಕಳೆದ ಐದು ವರ್ಷಗಳಲ್ಲಿ ಮೂರು ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ

* ಪಶ್ಚಿಮಘಟ್ಟಗಳು ಹರಡಿರುವ ಆರು ರಾಜ್ಯಗಳಿಂದ ನಿರ್ಲಕ್ಷ್ಯ

* ಕಸ್ತೂರಿ ರಂಗನ್‌ ವರದಿ ಶಿಫಾರಸು ಅನುಷ್ಠಾನಕ್ಕೆ 2014ರ ಮಾರ್ಚ್‌ 10ರಂದು ಮೊದಲ ಅಧಿಸೂಚನೆ

* 2015 ಮತ್ತು 2017ರಲ್ಲಿ ಎರಡು ಮತ್ತು ಮೂರನೇ ಅಧಿಸೂಚನೆ ಪ್ರಕಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT