ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ರಿ ಕವಿತಾ ರಕ್ಷಿಸಲು ಬಿ.ಎಲ್‌. ಸಂತೋಷ್‌ ಬಂಧನ ಬಯಸಿದ್ದ ಕೆಸಿಆರ್‌

ಇ.ಡಿ ಕುಣಿಕೆಯಿಂದ ಪುತ್ರಿ ಕವಿತಾ ಪಾರು ಮಾಡುವ ಉದ್ದೇಶ– ಆರೋಪ
Published 28 ಮೇ 2024, 23:06 IST
Last Updated 28 ಮೇ 2024, 23:06 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಶಾಸಕರ ಖರೀದಿ ಪ್ರಕರಣವನ್ನು ಬಳಸಿಕೊಂಡು ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್‌ ಅವರನ್ನು ಬಂಧಿಸಲು ಆಗಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಬಯಸಿದ್ದರು. ಅಲ್ಲದೇ, ದೆಹಲಿ ಅಬಕಾರಿ ನೀತಿ ಹಗರಣದ ನಂಟಿನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕುಣಿಕೆಯಿಂದ ತಮ್ಮ ಪುತ್ರಿ ಕೆ.ಕವಿತಾ ಅವರನ್ನು ಪಾರು ಮಾಡಲು ಸಂತೋಷ್ ಬಂಧನ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯ ಕೇಂದ್ರ ನಾಯಕತ್ವ ರಾಜಿಯಾಗುವಂತೆ ಮಾಡುವುದು ಸಹ ಅವರ ಬಯಕೆಯಾಗಿತ್ತು’ ಎಂಬ ವಿಷಯ ಈಗ ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಾರ್ಯಪಡೆಯ ಮಾಜಿ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್‌ಡಿ) ಪೋತಲಪಲ್ಲಿ ರಾಧಾಕಿಶನ್ ರಾವ್‌, ತಾವು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾರೆ. ಏಪ್ರಿಲ್‌ 9ರಂದು ಅವರು ಈ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದಲ್ಲಿನ ಅಂಶಗಳು ಸೋಮವಾರ ಬಹಿರಂಗಗೊಂಡಿವೆ.

‘ತಮ್ಮ ನಿರೀಕ್ಷೆಯಂತೆ ಯೋಜನೆ ಕಾರ್ಯಗತವಾಗದಿರುವುದಕ್ಕೆ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರಿಗೆ ಬೇಸರವಾಗಿತ್ತು. ಅಲ್ಲದೇ, ಪುತ್ರಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಈಗ ಅವರು ತಿಹಾರ್‌ ಜೈಲಿನಲ್ಲಿದ್ದಾರೆ’ ಎಂದೂ ರಾಧಾಕಿಶನ್‌ ರಾವ್‌ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.

‘ಶಾಸಕರ ಖರೀದಿ ಪ್ರಕರಣ ಕುರಿತು ಸೈಬರಾಬಾದ್‌ ಪೊಲೀಸರು ತನಿಖೆ ಆರಂಭಿಸಿದರು. ನಂತರ, ಎಸ್‌ಐಟಿ ರಚಿಸಿದ್ದ ಕೆಸಿಆರ್‌, ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್‌ ಅವರನ್ನು ಬಂಧಿಸಲು ಬಯಸಿದ್ದರು. ಶಾಸಕರ ಖರೀದಿ ಪ್ರಕರಣವನ್ನು ಮತ್ತಷ್ಟು ಪ್ರಬಲಗೊಳಿಸಿ, ಆ ಮೂಲಕ ರಾಜಿಯಾಗಲು ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಬೇಕು. ನಂತರ, ಈ ವಿಚಾರವನ್ನು ತಮ್ಮ ಪುತ್ರಿಯನ್ನು ಇ.ಡಿ ಕುಣಿಕೆಯಿಂದ ಪಾರು ಮಾಡಲು ಬಳಸಿಕೊಳ್ಳಬೇಕು ಎಂಬುದು ಅವರ ಯೋಜನೆಯಾಗಿತ್ತು’ ಎಂದು ರಾಧಾಕಿಶನ್ ರಾವ್‌ ತಿಳಿಸಿದ್ದಾರೆ.

‘ಕೇರಳಕ್ಕೆ ತೆರಳಿದ್ದ ಸೈಬರಾಬಾದ್‌ ಪೊಲೀಸ್‌ ಅಧಿಕಾರಿಗಳ ತಂಡದಲ್ಲಿನ ಕೆಲವರ ಅಸಮರ್ಥತೆ ಕಾರಣದಿಂದಾಗಿ, ಪ್ರಕರಣದ ಪ್ರಮುಖ ವ್ಯಕ್ತಿಯಾಗಿದ್ದ ಅಮೃತಾನಂದಮಯಿ ಸಂಸ್ಥೆಯ ಉದ್ಯೋಗಿ ಪೊಲೀಸರಿಂದ ತಪ್ಪಿಸಿಕೊಂಡರು. ಬಳಿಕ, ಪೊಲೀಸರ ತಂಡವೊಂದನ್ನು ವಿಮಾನದಲ್ಲಿ ಕೇರಳಕ್ಕೆ ಕಳುಹಿಸಿಕೊಟ್ಟರೂ ಆ ವ್ಯಕ್ತಿಯನ್ನು ಬಂಧಿಸುವ ಪ್ರಯತ್ನ ಫಲ ನೀಡಲಿಲ್ಲ’ ಎಂದೂ ರಾವ್‌ ಹೇಳಿದ್ದಾರೆ.

‘ನಂತರ, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು. ಪ್ರಕರಣದಲ್ಲಿ ಯಾರನ್ನೂ ಬಂಧಿಸದಂತೆ ಹೈಕೋರ್ಟ್‌ ಆದೇಶಿಸಿತು. ಆಮೇಲೆ, ಪ್ರಕರಣವನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾಯಿಸಲಾಯಿತು’ ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಿರೀಕ್ಷೆ ಪ್ರಕಾರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಸದೇ ಇರುವುದಕ್ಕೆ ಚಂದ್ರಶೇಖರರಾವ್ ಬಹಳ ಸಿಟ್ಟಾಗಿದ್ದರು. 2020ರಲ್ಲಿ ನಾನು ನಿವೃತ್ತನಾದೆ. ಆದಾಗ್ಯೂ ನನ್ನನ್ನು ಎರಡು ಬಾರಿ ನಗರ ಕಾರ್ಯಪಡೆಗೆ ನೇಮಕ ಮಾಡಲಾಗಿತ್ತು. ಹೀಗಾಗಿ, ಕೆಸಿಆರ್‌ ಅವರಿಗೆ ನಾನು ಋಣಿಯಾಗಿದ್ದು, ಪ್ರಕರಣ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ. 

ನಾಲ್ವರ ಬಂಧನ: ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ನಾಲ್ವರು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದೆ. ಡಿಸಿಪಿ (ಪಶ್ಚಿಮ ವಲಯ) ಎಸ್‌.ಎಂ.ವಿಜಯಕುಮಾರ್ ನೇತೃತ್ವದ ಎಸ್‌ಐಟಿ ಈ ಕುರಿತು ತನಿಖೆ ನಡೆಸಿತ್ತು. ರಾಧಾಕಿಶನ್‌ ರಾವ್‌ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದಾರೆ.

ಎಸ್‌ಐಟಿ ವರದಿ:

‘ಆಗಿನ ಐಜಿ ಟಿ.ಪ್ರಭಾಕರ್ ರಾವ್ ಅವರು ಪ್ರತ್ಯೇಕ ತಂಡವೊಂದನ್ನು ರಚಿಸಿದ್ದರು. ರಾಜಕೀಯ ಮುಖಂಡರು, ಅದರಲ್ಲೂ ವಿಪಕ್ಷಗಳ ನಾಯಕರು, ಬಿಆರ್‌ಎಸ್‌ನ ಭಿನ್ನಮತೀಯ ನಾಯಕರ ಮೇಲೆ ಕಣ್ಗಾವಲಿಡುವ ಹೊಣೆಯನ್ನು ಈ ತಂಡಕ್ಕೆ ವಹಿಸಲಾಗಿತ್ತು. ಜೊತೆಗೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷ ಸತತ ಮೂರನೇ ಬಾರಿ ಗೆಲ್ಲುವುದನ್ನು ಖಾತ್ರಿಪಡಿಸುವ ಗುರಿಯನ್ನು ಈ ತಂಡಕ್ಕೆ ನೀಡಲಾಗಿತ್ತು ಎಂಬುದಾಗಿ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ರಾಧಾಕಿಶನ್‌ ರಾವ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ’ ಎಂದು ನ್ಯಾಯಾಲಯಕ್ಕೆ ಏಪ್ರಿಲ್‌ನಲ್ಲಿ ಸಲ್ಲಿಸಿರುವ ವರದಿಯಲ್ಲಿ ಎಸ್‌ಐಟಿ ತಿಳಿಸಿದೆ.

‘ವಿವಿಧ ಪಕ್ಷಗಳ ನಾಯಕರ ಮೇಲೆ ನಿಗಾ ಇಡುವ ಹೊಣೆಯನ್ನು, ಸದ್ಯ ಅಮಾನತುಗೊಂಡಿರುವ ಡಿಎಸ್‌ಪಿ ದುಗ್ಯಾಲ ಪ್ರಣೀತ್‌ ರಾವ್‌ ನೇತೃತ್ವದ ವಿಶೇಷ ಕಾರ್ಯಾಚರಣೆ ಗುಂಪಿಗೆ ವಹಿಸಲಾಗಿತ್ತು’ ಎಂದೂ ರಾಧಾಕಿಶನ್‌ ರಾವ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಶಾಸಕರ ಖರೀದಿಗಾಗಿ ಮೊಯಿನಾಬಾದ್‌ ಫಾರ್ಮ್‌ಹೌಸ್‌ನಲ್ಲಿ ಸಭೆ ನಡೆಸಲಾಗಿತ್ತು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ 2022ರ ಅಕ್ಟೋಬರ್‌ನಲ್ಲಿ ನಾವು ಒಂದು ಮಹತ್ವದ ಕೆಲಸ ಮಾಡಿದೆವು. ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ, ಶಾಸಕರ ಖರೀದಿ ಪ್ರಯತ್ನ ಕುರಿತು ಆಗಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರಿಗೆ ಮಾಹಿತಿ ನೀಡಿದ್ದರು. ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ತನ್ನ ಸಂಪರ್ಕದಲ್ಲಿದ್ದು, ಹಲವು ಶಾಸಕರೊಂದಿಗೆ ಬಿಆರ್‌ಎಸ್‌ ತೊರೆದು ಬಿಜೆಪಿ ಸೇರುವಂತೆ ನನಗೆ ಹೇಳಿದ್ದಾಗಿ ರೋಹಿತ್‌ ರೆಡ್ಡಿ ಅವರು ಚಂದ್ರಶೇಖರ ರಾವ್‌ ಅವರಿಗೆ ತಿಳಿಸಿದ್ದರು. ಈ ಕುರಿತು ಪ್ರಭಾಕರ ರಾವ್‌ ನನ್ನೊಂದಿಗೆ ಚರ್ಚೆ ನಡೆಸಿದ್ದರು.’

‘ಈ ವಿಚಾರವನ್ನು ಬಳಸಿಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಚಂದ್ರಶೇಖರ ರಾವ್‌ ಯೋಜಿಸಿದ್ದರಲ್ಲದೇ, ಕೆಲ ಖಾಸಗಿ ವ್ಯಕ್ತಿಗಳು ಹಾಗೂ ಪಕ್ಷದ ಶಾಸಕರ ಮೇಲೆ ಕಣ್ಣಿಡುವಂತೆ ಸೂಚಿಸಿದ್ದರು. ಅದರಂತೆ, ನಿಗಾ ವಹಿಸಿದ್ದ ಪ್ರಣೀತಕುಮಾರ್‌ ರಾವ್‌, ಮೊಬೈಲ್‌ ಕರೆಗಳ ಧ್ವನಿಮುದ್ರಣವನ್ನು ಒದಗಿಸಿದ್ದರು. ಈ ಧ್ವನಿಮುದ್ರಣವನ್ನು ಚಂದ್ರಶೇಖರ ರಾವ್‌ ಅವರಿಗೆ ನೀಡಲಾಗಿತ್ತು.’

‘ಈ ಧ್ವನಿಮುದ್ರಣ ಬಳಸಿಕೊಂಡು, ಶಾಸಕರ ಖರೀದಿಗೆ ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಸಿಲುಕಿಸುವಂತೆ ಸೂಚಿಸಿದ್ದ ಚಂದ್ರಶೇಖರರಾವ್‌, ಈ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಶಾಸಕ ರೋಹಿತ್‌ ರೆಡ್ಡಿಗೆ ಸೂಚಿಸಿದ್ದರು’ ಎಂಬ ರಾಧಾಕಿಶನ್‌ ರಾವ್‌ ಅವರ ಹೇಳಿಕೆಯನ್ನು ಎಸ್‌ಐಟಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕೆಸಿಆರ್‌ ಸಂಚಕೋರ: ಬಿಜೆಪಿ ವಾಗ್ದಾಳಿ

ಕಾರ್ಯಪಡೆಯ ಮಾಜಿ ಒಎಸ್‌ಡಿ ರಾಧಾಕಿಶನ್‌ ರಾವ್‌ ಅವರ ತಪ್ಪೊಪ್ಪಿಗೆ ಹೇಳಿಕೆ ಬಹಿರಂಗಗೊಂಡ ಬೆನ್ನಲ್ಲೇ ಬಿಜೆಪಿಯ ತೆಲಂಗಾಣ ಘಟಕ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದೆ. ‘ತಾಂಡೂರು ಕ್ಷೇತ್ರ ಮಾಜಿ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಷಾಮೀಲಾಗಿರುವ ಬಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣದ ರೂವಾರಿ ಹಾಗೂ ನಿರ್ದೇಶಕ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಆಗಿದ್ದಾರೆ ಎಂಬ ಪಕ್ಷದ ಆರೋಪಗಳನ್ನು ಕಾರ್ಯಪಡೆಯ ಮಾಜಿ ಒಎಸ್‌ಡಿ ರಾಧಾಕಿಶನ್ ರಾವ್‌ ಅವರ ತಪ್ಪೊಪ್ಪಿಗೆ ಸಮರ್ಥಿಸಿದೆ’ ಎಂದು ತೆಲಂಗಾಣ ಬಿಜೆಪಿಯ ವಕ್ತಾರ ಎನ್‌.ವಿ.ಸುಭಾಷ್‌ ಹೇಳಿದ್ದಾರೆ. ‘ಬಿಜೆಪಿಗೆ ಕೆಟ್ಟ ಹೆಸರು ತರಲು ಹಾಗೂ ಪ್ರಕರಣದಲ್ಲಿ ಪಕ್ಷದ ಹಿರಿಯ ನಾಯಕರ ಹೆಸರನ್ನು ಎಳೆದು ತರಲು ಚಂದ್ರಶೇಖರರಾವ್ ಅವರೇ ಸಂಚು ರೂಪಿಸಿದ್ದರು ಎಂಬುದು ಈಗ ಬಹಿರಂಗಗೊಂಡಿದೆ’ ಎಂದು ಹೇಳಿದ್ದಾರೆ. ‘ಕೆ.ಚಂದ್ರಶೇಖರರಾವ್‌ ನೇತೃತ್ವದ ಆಗಿನ ಸರ್ಕಾರ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಪೊಲೀಸ್‌ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿತು. ರಾಜಕೀಯ ಲಾಭಕ್ಕಾಗಿ ವಿಪಕ್ಷಗಳ ನಾಯಕ ಫೋನ್‌ಗಳ ಕದ್ದಾಲಿಕೆ ಮಾಡಿದೆ’ ಎಂದು ಆರೋಪಿಸಿರುವ ಅವರು ‘ಮಾಜಿ ಮುಖ್ಯಮಂತ್ರಿ ಚಂದ್ರಶೇಖರರಾವ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿ.ಎಲ್‌.ಸಂತೋಷ್
ಬಿ.ಎಲ್‌.ಸಂತೋಷ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT