ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಜ್ರಿವಾಲ್‌ ಮನವಿ

Published 27 ಮೇ 2024, 5:25 IST
Last Updated 27 ಮೇ 2024, 5:25 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸಬೇಕು ಎಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್‌ನ ಸೂಚನೆಯ ಪ್ರಕಾರ ಜೂನ್ 2ರಂದು ಜೈಲಿಗೆ ವಾಪಸ್ ಆಗಬೇಕಿದೆ. 

ಪಿಇಟಿ–ಸಿಟಿ ಪರೀಕ್ಷೆ ಸೇರಿದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವ ಕಾರಣಕ್ಕೆ ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ.

ದೇಹದ ತೂಕವು ಇದ್ದಕ್ಕಿದ್ದಂತೆ ಕಡಿಮೆ ಆಗಿದೆ. ಕೀಟೊನ್ ಮಟ್ಟವು ಹೆಚ್ಚಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ. ಇವು ಮೂತ್ರಕೋಶದ ಸಮಸ್ಯೆ, ಹೃದಯದ ಗಂಭೀರ ಸಮಸ್ಯೆ ಅಥವಾ ಕ್ಯಾನ್ಸರ್‌ನ ಸೂಚಕಗಳಿರಬಹುದು ಎಂದು ಅದರಲ್ಲಿ ಹೇಳಲಾಗಿದೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್‌ 21 ದಿನಗಳ ಮಧ್ಯಂತರ ಜಾಮೀನನ್ನು ಮೇ 10ರಂದು ಮಂಜೂರು ಮಾಡಿತ್ತು. 

ಕೇಜ್ರಿವಾಲ್ ಅವರು ಜೂನ್ 2ರಂದು ಶರಣಾಗಬೇಕು ಎಂದು ಮಧ್ಯಂತರ ಜಾಮೀನು ನೀಡುವಾಗ ತಾಕೀತು ಮಾಡಿತ್ತು. ಜೂನ್‌ 2ರ ಬದಲು ಜೂನ್‌ 9ಕ್ಕೆ ಜೈಲಿಗೆ ಮರಳುವುದಾಗಿ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

‘ಒಂದು ವಾರದ ಅವಧಿಯಲ್ಲಿ ಅರ್ಜಿದಾರರು ನಿಗದಿತ ಪರೀಕ್ಷೆಗಳಿಗೆ ಒಳಗಾಗಿ, ಅವುಗಳ ವರದಿಯನ್ನು ಪಡೆಯಬಹುದು. ಅರ್ಜಿದಾರರು ಜೂನ್‌ 3ರಿಂದ ಜೂನ್‌ 7ರವರೆಗಿನ ಅವಧಿಯಲ್ಲಿ ಈ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ’ ಎಂದು ಕೋರ್ಟ್‌ಗೆ ಮನವಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಅರ್ಜಿಯನ್ನು ಕೋರ್ಟ್‌ನ ರಜಾಕಾಲದ ಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಜೈಲಿನಲ್ಲಿ ಇದ್ದ ಅವಧಿಯಲ್ಲಿ ಮುಖ್ಯಮಂತ್ರಿಯು ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾದರು. ಇದಕ್ಕೆ ಒಂದಿಷ್ಟು ಕಾರಣ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಅರ್ಜಿದಾರರ ರಕ್ತದಲ್ಲಿ ಗ್ಲುಕೋಸ್‌ನ ಅಂಶ, ಮೂತ್ರದಲ್ಲಿ ಕಿಟೋನ್‌ ಮಟ್ಟವು ತೀರಾ ಹೆಚ್ಚಾಗಿದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುವುದರ ಜೊತೆಗೆ, ಅರ್ಜಿದಾರರಲ್ಲಿ ಮೂತ್ರಕೋಶದ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂಬುದನ್ನು ಇವು ಹೇಳುತ್ತಿವೆ’ ಎಂದು ವಿವರಿಸಲಾಗಿದೆ.

ಖಾಸಗಿ ಆಸ್ಪತ್ರೆಯೊಂದರ ಹಿರಿಯ ವೈದ್ಯರೊಬ್ಬರು ತಮ್ಮ ಆರೋಗ್ಯದ ಪರೀಕ್ಷೆ ನಡೆಸಿದ್ದು, ಹಲವು ಪರೀಕ್ಷೆಗಳಿಗೆ ಒಳಗಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿರುವ ಕೇಜ್ರಿವಾಲ್, ಜೈಲಿಗೆ ಮರಳುವ ಮೊದಲು ಈ ಪರೀಕ್ಷೆಗಳನ್ನು ನಡೆಸಬೇಕಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT