ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

Published 21 ಜೂನ್ 2024, 15:28 IST
Last Updated 21 ಜೂನ್ 2024, 15:28 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ಹೇರಿದೆ. ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಯಾರೋ ‘ಟಾಮ್‌, ಡಿಕ್‌ ಅಥವಾ ಹ್ಯಾರಿ’ ಎಂಬಂತೆ ನಡೆಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷ ಕಪಿಲ್ ಸಿಬಲ್ ಶುಕ್ರವಾರ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹಣದ ಅಕ್ರಮ ವರ್ಗಾವಣೆ ಕುರಿತಂತೆ ಬಂಧನದಲ್ಲಿರುವ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯ ಗುರುವಾರ ಮಂಜೂರು ಮಾಡಿದ್ದ ಜಾಮೀನು ಅರ್ಜಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಿಬಲ್ ತಮ್ಮ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.

‘ಪೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಬಂಧನಕ್ಕೆ ನ್ಯಾಯಾಲಯ ತಡೆ ನೀಡಿದೆ. ಈ ಆದೇಶ ನೀಡುವಾಗ ನ್ಯಾಯಾಲಯವು ಅವರೇನು, ‘ಟಾಮ್‌, ಡಿಕ್‌ ಹಾಗೂ ಹ್ಯಾರಿ’ ಅಲ್ಲ ಎಂದಿತ್ತು. ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಅವರಿಗೂ ಜಾಮೀನು ಮಂಜೂರು ಮಾಡಿದೆ. ಆದರೆ ಕೇಜ್ರಿವಾಲ್ ಹಾಗೂ ಸೊರೆನ್ ಪ್ರಕರಣದಲ್ಲಿ ಟಾಮ್, ಡಿಕ್‌ ಅಥವಾ ಹ್ಯಾರಿ ಏಕೆ ಅನ್ವಯಿಸಲಿಲ್ಲ ಎಂಬುದು ಸೋಜಿಗ’ ಎಂದಿದ್ದಾರೆ.

ಜೂನ್ 20ರಂದು ಮಂಜೂರಾಗಿದ್ದ ಜಾಮೀನು ಪ್ರಶ್ನಿಸಿರುವ ಜಾರಿ ನಿರ್ದೇಶನಾಲಯದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಜ್ರಿವಾಲ್ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ. ವಿಚಾರಣೆ ನಡೆಸಿದ ನ್ಯಾ. ಸುಧೀರ್ ಕುಮಾರ್ ಜೈನ್ ಅವರ, ‘ಆದೇಶ ಪ್ರಕಟಿಸುವವರೆಗೂ ಜಾಮೀನು ಆದೇಶ ತಡೆಯಲ್ಲಿರುತ್ತದೆ’ ಎಂದಿದ್ದಾರೆ.

ಈ ಪ್ರಕರಣದಲ ವಿಚಾರಣೆಯ ದಾಖಲೆಗಳನ್ನು ಕೂಲಂಕಷವಾಗಿ ನೋಡಬೇಕಿರುವುದರಿಂದ ಆದೇಶ ಪ್ರಕಟಿಸಲು 2ರಿಂದ 3 ದಿನ ಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT