ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerala BJP ಮುಖಂಡನ ಹತ್ಯೆ: 15 PFI ಕಾರ್ಯಕರ್ತರಿಗೆ ಗಲ್ಲು; ಪ್ರಕರಣದ ಮಾಹಿತಿ...

Published 30 ಜನವರಿ 2024, 12:58 IST
Last Updated 30 ಜನವರಿ 2024, 12:58 IST
ಅಕ್ಷರ ಗಾತ್ರ

ಆಲಪ್ಪುಳ: ಕೇರಳದಲ್ಲಿ ಬಿಜೆಪಿ ಮುಖಂಡ ರಂಜಿತ್‌ ಶ್ರೀನಿವಾಸನ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಗೆ ಸೇರಿದ 15 ಜನರಿಗೆ ಕೇರಳ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

2021ರ ಡಿಸೆಂಬರ್‌ನಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಹತ್ಯೆ ನಡೆದಿತ್ತು. ಆಗ ರಂಜಿತ್‌ ಶ್ರೀನಿವಾಸನ್‌ ಬಿಜೆಪಿ ಒಬಿಸಿ ವಿಭಾಗದ ಮುಖಂಡರಾಗಿದ್ದರು. ಅಪರಾಧಿಗಳು ರಂಜಿತ್‌ ಶ್ರೀನಿವಾಸನ್‌ನನ್ನು ಆತನ ತಾಯಿ, ಮಗು ಮತ್ತು ಹೆಂಡತಿಯ ಮುಂದೆ ಬಹಳ ಕ್ರೂರವಾಗಿ ಹಾಗೂ ಪೈಶಾಚಿಕ ರೀತಿಯಲ್ಲಿ ಕೊಲೆಗೈದಿದ್ದರು.

ಸ್ಥಳೀಯ ನ್ಯಾಯಾಲಯ ಪಿಎಫ್‌ಐನ 15 ಜನರಿಗೂ ಗಲ್ಲು ಶಿಕ್ಷೆ ವಿಧಿಸಿದೆ. ಸದ್ಯ ಇವರಲ್ಲಿ ಒಬ್ಬ ಅಪರಾಧಿ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಪ್ರಕರಣವೇನು? 

2021 ಡಿಸೆಂಬರ್‌ 19ರಂದು ಆಲಪ್ಪುಳದಲ್ಲಿ ಬಿಜೆಪಿಯ ರಂಜಿತ್ ಶ್ರೀನಿವಾಸನ್ ಅವರ ಮನೆಯ ಮೇಲೆ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆ ಪಿಎಫ್‌ಐ ಹಾಗೂ ಅದರ ರಾಜಕೀಯ ವಿಭಾಗ ಎಸ್‌ಡಿಪಿಐನ ಕಾರ್ಯಕತರು ದಾಳಿ ಮಾಡಿದ್ದರು.

ಈ ವೇಳೆ ರಂಜಿತ್‌ ಅವರ ತಾಯಿ, ಪತ್ನಿ ಹಾಗೂ ಮಗಳ ಎದುರಲ್ಲೇ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಭೀಕರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ರಂಜಿತ್‌ ರಕ್ಷಣೆಗೆ ಬಂದಿದ್ದ ಅವರ ತಾಯಿ, ಪತ್ನಿ ಹಾಗೂ ಸ್ಥಳೀಯರ ಮೇಲೂ ದಾಳಿ ಮಾಡಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವು ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ 15 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ರಂಜಿತ್ ಶ್ರೀನಿವಾಸನ್ ಹತ್ಯೆಗೂ ಮುನ್ನಾ ದಿನ ಎಸ್‌ಡಿಪಿಐನ ನಾಯಕ ಕೆ.ಎಸ್ ಶಾನ್ ಅವರ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದಿತ್ತು. ವಾದ ವಿವಾದದಲ್ಲಿ ಪ್ರಾಸಿಕ್ಯೂಷನ್ 156 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು. ಸಾವಿರಕ್ಕೂ ಹೆಚ್ಚು ದಾಖಲೆಗಳು, ನೂರಕ್ಕೂ ಹೆಚ್ಚು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದಲ್ಲದೇ ಬೆರಳಚ್ಚುಗಳು, ಸಿಸಿಟಿವಿ ದೃಶ್ಯಾವಳಿಗಳು, ಗೂಗಲ್ ಮ್ಯಾಪ್‌ ಸೇರಿಂದತೆ ವೈಜ್ಞಾನಿಕ ಪುರಾವೆಗಳನ್ನು ಸಾಕ್ಷ್ಯಕ್ಕೆ ಬಳಸಲಾಗಿತ್ತು. 

ಅಂತಿಮವಾಗಿ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿ.ಜಿ. ಶ್ರೀದೇವಿ ಅವರು ಜನವರಿ 20ರಂದು ಪಿಎಫ್‌ಐನ 15 ಮಂದಿ ಕಾರ್ಯಕರ್ತರು ದೋಷಿಗಳೆಂದು ಘೋಷಣೆ ಮಾಡಿದ್ದರು. ಇಂದು ತೀರ್ಪು ಪ್ರಕಟಿಸಿ ಎಲ್ಲರಿಗೂ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. 

ಮರಣದಂಡನೆಗೆ ಗುರಿಯಾದ ಅಪರಾಧಿಗಳು...

ನವಾಜ್, ಅನೂಪ್, ಸಫಾರುದ್ದೀನ್, ಮುನ್ಶಾದ್, ಮೊಹಮ್ಮದ್ ಅಸ್ಲಂ, ಸಲಾಂ ಪೊನ್ನಾದ್, ಶಮೀರ್, ನಸೀರ್, ಜಾಕೀರ್ ಹುಸೇನೆ, ಜಸೀಬ್ ರಾಜಾ, ಶಾಜಿ , ಶೆರ್ನಾಜ್ ಅಶ್ರಫ್, ನಿಜಾಂ, ಅಜ್ಮಲ್ ಹಾಗೂ ಅಬ್ದುಲ್ ಕಲಾಂ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹತ್ಯೆಯಲ್ಲಿ 8 ಅಪರಾಧಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. 

15 ಅಪರಾಧಿಗಳ ಪೈಕಿ ಒಬ್ಬ ಅನಾರೋಗ್ಯದಿಂದಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT