ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ: ಸಂಪ್ರದಾಯ ಮುರಿದ ಕೇಂದ್ರ –ಕೇರಳ ಸಿಎಂ ಕಿಡಿ

ಅರುಣ್ ರಘುನಾಥ್
Published 22 ಜೂನ್ 2024, 2:41 IST
Last Updated 22 ಜೂನ್ 2024, 2:41 IST
ಅಕ್ಷರ ಗಾತ್ರ

ತಿರುವನಂತಪುರ: ‌ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕತ್ವವು ಸಂಸತ್ತಿನ ಸಂಪ್ರದಾಯವನ್ನು ಮುರಿದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ.

ಎಂಟು ಬಾರಿಯ ಸಂಸದ ಕೋಡಿಕ್ಕುನ್ನಿಲ್‌ ಸುರೇಶ್‌ (ಕಾಂಗ್ರೆಸ್‌) ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡದ್ದಕ್ಕೆ ವಿಜಯನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರದ ಮೇಲ್ಜಾತಿ ರಾಜಕಾರಣದಿಂದ ಪ್ರಭಾವಿತರಾಗಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

'ಕೇರಳದ ಮಾವೇಲಿಕ್ಕರ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ಸಂಸದ ಕೋಡಿಕ್ಕುನ್ನಿಲ್‌ ಸುರೇಶ್‌ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡದಿರಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಸಂಘ ಪರಿವಾರದ ಮೇಲ್ಜಾತಿ ರಾಜಕಾರಣವು ಈ ನಿರ್ಧಾರಕ್ಕೆ ಪ್ರೇರಣೆಯಾಗಿದೆ ಎಂಬ ಅನುಮಾನಗಳ ಬಗ್ಗೆ ಬಿಜೆಪಿಯ ಪ್ರತಿಕ್ರಿಯೆ ಏನು?' ಎಂದು ಕೇಳಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಬಿಜೆಡಿ ತೊರೆದು ಬಿಜೆಪಿ ಸೇರಿದ್ದ 7 ಬಾರಿಯ ಸಂಸದ ಭರ್ತೃಹರಿ ಮಹ್ತಬ್‌ ಅವರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ಆಗಿ ಗುರುವಾರ ನೇಮಿಸಲಾಗಿದೆ. ಆ ಮೂಲಕ, ಹಿರಿಯ ಸಂಸದರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸುವ ಸಂಪ್ರದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕತ್ವವು, ಸಂಸತ್ತಿನ ಸಂಪ್ರದಾಯಗಳನ್ನು ಧಿಕ್ಕರಿಸುವ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ಸವಾಲೆಸೆಯುತ್ತಿದೆ ಮತ್ತು ಅವಮಾನ ಮಾಡುತ್ತಿದೆ. ಈ (ಹಂಗಾಮಿ ಸಭಾಧ್ಯಕ್ಷರ ಆಯ್ಕೆ) ನಿರ್ಧಾರವು ಅತ್ಯಂತ ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ ಸಭಾಧ್ಯಕ್ಷರ ಸ್ಥಾನ ಕಳೆದ ಐದು ವರ್ಷಗಳಿಂದ ಖಾಲಿ ಇದೆ ಎಂದೂ ಉಲ್ಲೇಖಿಸಿದ ವಿಜಯನ್‌, ವಿರೋಧ ಪಕ್ಷದವರಿಗೆ ಆ ಸ್ಥಾನ ನೀಡಲು ಬಿಜೆಪಿ ಸಿದ್ಧವಿಲ್ಲದಿರುವುದೇ ಇದಕ್ಕೆ ಕಾರಣ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT