ತಿರುವನಂತಪುರ: ಭೀಕರ ಭೂಕುಸಿತದಿಂದಾಗಿ ಅಪಾರ ಸಾವು–ನೋವು ಸಂಭವಿಸಿದ್ದರೂ, ರಾಜ್ಯದ ವಯನಾಡ್ ಮತ್ತು ಕೋಯಿಕ್ಕೋಡ್ ನಡುವೆ ಎರಡು ಸುರಂಗ ಮಾರ್ಗಗಳ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಕೇರಳ ಸರ್ಕಾರ ಮುಂದಾಗಿದೆ.
ಉದ್ದೇಶಿತ ಸುರಂಗ ಮಾರ್ಗಗಳು ಇತ್ತೀಚೆಗೆ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಹತ್ತಿರದಲ್ಲಿಯೇ ನಿರ್ಮಾಣವಾಗಲಿರುವುದು ಮತ್ತಷ್ಟು ಕಳವಳಕಾರಿ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಹೇಳಿದೆ.
ವಯನಾಡ್‌ನ ಮೇಪ್ಪಾಡಿಯಿಂದ ಕೋಯಿಕ್ಕೋಡ್‌ನ ಅನಕ್ಕಂಪೋಯಿಲ್ ವರೆಗೆ, 8.7 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ತೆರೆಯಲಾಗಿದೆ. ಭೋಪಾಲ್ ಮೂಲದ ದಿಲೀಪ್ ಬಿಲ್ಡ್‌ಕಾನ್ ₹1,341 ಕೋಟಿ ಮೊತ್ತದ ಕನಿಷ್ಠ ಬಿಡ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
‘ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳುವ ವಿಶ್ವಾಸವಿದೆ’ ಎಂದು ಕೋಯಿಕ್ಕೋಡ್‌ನ ತಿರುವಂಬಾಡಿ ಕ್ಷೇತ್ರದ ಸಿಪಿಎಂ ಶಾಸಕ ಲಿಂಟೊ ಜೋಸೆಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.