ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslide: 5ನೇ ದಿನಕ್ಕೆ ರಕ್ಷಣಾ ಕಾರ್ಯಾಚರಣೆ; 215 ಮೃತದೇಹಗಳು ಪತ್ತೆ

Published : 3 ಆಗಸ್ಟ್ 2024, 10:04 IST
Last Updated : 3 ಆಗಸ್ಟ್ 2024, 10:04 IST
ಫಾಲೋ ಮಾಡಿ
Comments

ವಯನಾಡ್: ಕೇರಳದ ಉತ್ತರಭಾಗದಲ್ಲಿರುವ ವಯನಾಡ್‌ನಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಈವರೆಗೂ 215 ಜನರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ 206 ಜನರಿಗಾಗಿ ಶೋಧ ಕಾರ್ಯ 5ನೇ ದಿನವಾದ ಶನಿವಾರವೂ ಮುಂದುವರಿದಿದೆ.

ಮುಂಡಕ್ಕೈ ಹಾಗೂ ಚೂರಲ್‌ಮಾಲಾದ ನಾಗರಿಕ ವಸತಿ ಪ್ರದೇಶಗಳಲ್ಲಿ ಬೃಹತ್ ಬಂಡೆಗಳು ಹಾಗೂ ಮರದ ದಿಮ್ಮಿಗಳು ಶೇಖರಣೆಯಾಗಿವೆ. ಇದು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿವೆ.

ಭೂಕುಸಿತದ ನಂತರ ಧ್ವಂಸಗೊಂಡ ಹಳ್ಳಿಗಳಲ್ಲಿ ರಾಶಿ ಬಿದ್ದಿರುವ ಕಟ್ಟಡ ಹಾಗೂ ಗುಡ್ಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಗಳಿವೆ. ಹೀಗಾಗಿ ಪತ್ತೆ ಕಾರ್ಯಕ್ಕೆ ರಾಡಾರ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನವಾದ ಒನ್ ಕ್ಷೇವಿಯರ್ ರಾಡಾರ್ ಹಾಗೂ ಫೋರ್ ರೀಕೊ ರಾಡಾರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬಳಕೆ ಮಾಡುವಂತೆ ಕೇರಳ ಸರ್ಕಾರವು ಕೇಂದ್ರವನ್ನು ಹಾಗೂ ಭಾರತೀಯ ವಾಯು ಸೇನೆಯನ್ನು ಕೋರಿದೆ. 

ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಇನ್ನೂ 206 ಜನ ನಾಪತ್ತೆಯಾಗಿದ್ದಾರೆ. ಚಲ್ಲಿಯಾರ್ ನದಿಯಿಂದ ಹೊರತೆಗೆಯಲಾದ ಕೆಲವೊಂದು ಮೃತದೇಹ ಹಾಗೂ ದೇಹದ ಭಾಗಗಳು ಗುರುತು ಸಿಗದಂತಾಗಿವೆ. ಈವರೆಗೂ 215 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇದರಲ್ಲಿ 87 ಮಹಿಳೆಯರು, 98 ಪುರುಷರು ಹಾಗೂ 30 ಮಕ್ಕಳು ಇದ್ದಾರೆ. 148 ಮೃತ ದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 81 ಜನರು ಗಾಯಗೊಂಡಿದ್ದಾರೆ. ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪುನರ್ವಸತಿ ಕಲ್ಪಿಸುವ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿರುವ ವಿಜಯನ್, ‘ಸೂಕ್ತ ಹಾಗೂ ಸುರಕ್ಷಿತ ಪ್ರದೇಶವನ್ನು ಗುರುತಿಸಲಾಗುವುದು. ಅಲ್ಲಿ ಹೊಸ ಪಟ್ಟಣ ನಿರ್ಮಾಣ ಮಾಡಲಾಗುವುದು’ ಎಂದಿದ್ದಾರೆ.

‘ಪೀಡಿತ ಪ್ರದೇಶಗಳಿಗೆ ಶಿಕ್ಷಣ ಸಚಿವರು ಭೇಟಿ ನೀಡಲಿದ್ದಾರೆ. ಈ ದುರಂತಕ್ಕೆ ಸಿಲುಕಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು’ ಎಂದಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಹಾನಿಗೀಡಾದ ಪ್ರದೇಶಗಳಿಗೆ ನಟ ಹಾಗೂ ಲೆಫ್ಟಿನೆಂಟ್ ಕರ್ನಲ್ (ಗೌರವ) ಮೋಹನ್‌ಲಾಲ್‌ ಅವರು ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಹಾನಿಗೀಡಾದ ಪ್ರದೇಶಗಳಿಗೆ ನಟ ಹಾಗೂ ಲೆಫ್ಟಿನೆಂಟ್ ಕರ್ನಲ್ (ಗೌರವ) ಮೋಹನ್‌ಲಾಲ್‌ ಅವರು ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು

ಪಿಟಿಐ ಚಿತ್ರ

ರಕ್ಷಣಾ ಕಾರ್ಯದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌

ಕೇರಳದ ವಯನಾಡ್‌ನಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಲಯಾಳಂ ಸಿನಿಮಾದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಸೇನಾ ಸಮವಸ್ತ್ರದಲ್ಲಿ ಶನಿವಾರ ಧುಮುಕಿದ್ದಾರೆ. 

ಭೂಕುಸಿತ ಪೀಡಿತ ಪ್ರದೇಶಕ್ಕೆ ಬಂದಿಳಿದ ಮೋಹನ್‌ಲಾಲ್, ಅಲ್ಲಿದ್ದ ಸೇನಾ ಕ್ಯಾಂಪ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಕೆಲ ಕಾಲ ಚರ್ಚಿಸಿದರು. ನಂತರ ಮುಂಡಕ್ಕೈ, ಚೂರಲ್‌ಮಲ, ಪುಂಜಿರಿವಟ್ಟಂ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಿದರು. ಸ್ಥಳೀಯರು, ಸೇನಾ ಸಿಬ್ಬಂದಿಯೊಂದಿಗೆ ಚರ್ಚಿಸಿ, ಪರಿಸ್ಥಿತಿಯ ಮಾಹಿತಿ ಪಡೆದರು.

‘ದೇಶ ಕಂಡರಿಯದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವಿದು. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಲ್ಲಿ ಪುನರ್ವಸತಿ ಕಲ್ಪಿಸಲು ತಮ್ಮದೇ ಆದ ವಿಶ್ವಶಾಂತಿ ಪ್ರತಿಷ್ಠಾನದ ಮೂಲಕ ₹3 ಕೋಟಿ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

ನಿವೃತ್ತ ಸೇನಾಧಿಕಾರಿಯೂ ಆಗಿರುವ ನಟ ಹಾಗೂ ನಿರ್ದೇಶಕ ಮನೋಜ್ ರವಿ ಅವರೂ ಮೋಹನ್‌ಲಾಲ್ ಅವರೊಂದಿಗೆ ಇದ್ದರು. ಮುಂಡಕ್ಕೈನಲ್ಲಿ ಹೊಸ ಶಾಲೆಯನ್ನು ನಿರ್ಮಿಸುವ ಭರವಸೆ ನೀಡಿದರು.

ಇದರ ನಡುವೆಯೇ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಕಾಂಗ್ರೆಸ್‌ ಶಾಸಕ ರಮೇಶ್ ಚೆನ್ನಿತ್ತಾಳ ಅವರು ತಮ್ಮ ಒಂದು ತಿಂಗಳ ವೇತವನ್ನು ನೀಡುವುದಾಗಿ ಘೋಷಿಸಿದ್ದು, ಪಕ್ಷದೊಳಗೆ ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ. ಸುಧಾಕರನ್, ‘ಸಿಪಿಐಎಂ ನೇತೃತ್ವದ ಸರ್ಕಾರದ ನಿಧಿಗೆ ನೆರವು ನೀಡುವ ಅಗತ್ಯ ಇರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಸ್ಮಶಾನಕ್ಕೆ ಶವಸಂಸ್ಕಾರಕ್ಕಾಗಿ ಸ್ವಯಂ ಸೇವಕರು ಪಾರ್ಥೀವಶರೀರವನ್ನು ತಂದ ದೃಶ್ಯ

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಸ್ಮಶಾನಕ್ಕೆ ಶವಸಂಸ್ಕಾರಕ್ಕಾಗಿ ಸ್ವಯಂ ಸೇವಕರು ಪಾರ್ಥೀವಶರೀರವನ್ನು ತಂದ ದೃಶ್ಯ

ರಾಯಿಟರ್ಸ್ ಚಿತ್ರ

ಪರಿಹಾರ ನಿಧಿ ವಿರುದ್ಧ ಪೋಸ್ಟ್‌: 39 ಎಫ್‌ಐಆರ್ ದಾಖಲು

ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಲ್ಲಿ ನೊಂದವರ ನೆರವಿಗಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಅವರು ಕೋರಿಕೆ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದವರ ವಿರುದ್ಧ ಪೊಲೀಸರು 39 ಪ್ರಕರಣ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ವಿರುದ್ಧ 279 ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದರ ನಡುವೆಯೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ವ್ಯಾಪಕ ದೇಣಿಗೆ ಹರಿದಬರುತ್ತಿದೆ. ಶ್ರೀಮಂತರಿಂದ ಹಿಡಿದು, ಶಾಲಾ ಮಕ್ಕಳು, ಅಧಿಕಾರಿಗಳು, ಗೃಹಿಣಿಯರು, ಸರ್ಕಾರಿ ನೌಕರರಾದಿಯಾಗಿ ದೇಣಿಗೆ ನೀಡುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT