ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬುಲ್ಲಿ ಬಾಯಿ' ಆ್ಯಪ್ ವಿವಾದ: ಅಸ್ಸಾಂನಲ್ಲಿ ಶಂಕಿತ ಪ್ರಮುಖ ಆರೋಪಿ ಸೆರೆ

Last Updated 6 ಜನವರಿ 2022, 20:46 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗಮನ ಸೆಳೆದಿರುವ ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಅಸ್ಸಾಂನ ಜೋರ್ಹಾಟ್‌ನಲ್ಲಿ ನೀರಜ್‌ ಬಿಷ್ಣೋಯಿ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಗುರುವಾರ ಬಂಧಿಸಿದ್ದಾರೆ.

‘ನೀರಜ್‌ ಈ ಪ್ರಕರಣದ ಮುಖ್ಯ ಸಂಚುಕೋರ ಹಾಗೂ ಆ್ಯಪ್ಅನ್ನು ಸೃಷ್ಟಿಸಿದಾತ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರಗೆ ನಾಲ್ವರನ್ನು ಬಂಧಿಸಿದಂತಾಗಿದೆ.

ದೆಹಲಿ ಪೊಲೀಸ್‌ ವಿಶೇಷ ಘಟಕದ ಅಂಗಸಂಸ್ಥೆಯಾದ ‘ಇಂಟೆಲಿಜೆನ್ಸ್ ಫ್ಯೂಜನ್ ಆ್ಯಂಡ್ ಸ್ಟ್ರ್ಯಾಟೆಜಿಕ್ ಆಪರೇಷನ್ಸ್‌ನ (ಐಎಫ್‌ಎಸ್‌ಒ) ಅಧಿಕಾರಿಗಳು ಅಸ್ಸಾಂನ ಜೋರ್ಹಾಟ್‌ ನಿವಾಸಿ ನೀರಜ್‌ರನ್ನು ಬಂಧಿಸಿದ್ದಾರೆ. ಈತ ಭೋಪಾಲ್‌ನಲ್ಲಿರುವ ವೆಲ್ಲೂರ್ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್‌ ವಿದ್ಯಾರ್ಥಿ.

ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಬಂಧಿಸಿರುವ ಮೊದಲ ಆರೋಪಿ ಈತ. ಪ್ರಕರಣ ಕುರಿತು ಮುಂಬೈಸೈಬರ್‌ ಕ್ರೈಂ ಪೊಲೀಸರು ಸಹ ತನಿಖೆ ನಡೆಸುತ್ತಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ.

ಶ್ವೇತಾ ಸಿಂಗ್‌ (18) ಹಾಗೂ ದೆಹಲಿ ವಿ.ವಿಯಲ್ಲಿ ಬಿಎಸ್‌ಸಿ ಅಧ್ಯಯನ ಮಾಡುತ್ತಿರುವ ಮಯಂಕ್ ರಾವಲ್ (20) ಎಂಬ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ. ವಿಶಾಲಕುಮಾರ್‌ ಝಾ (21) ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

‘ಗಿಟ್‌ಹಬ್ ವೇದಿಕೆಯಲ್ಲಿ ಬುಲ್ಲಿ ಬಾಯಿ ಆ್ಯಪ್‌ಅನ್ನು ತಾನೇ ಅಭಿವೃದ್ಧಿಪಡಿಸಿದ್ದಾಗಿ ನೀರಜ್‌ ಬಿಷ್ಣೋಯಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಐಎಫ್‌ಎಸ್‌ಒ ಡಿಸಿಪಿ ಕೆ.ಪಿ.ಎಸ್‌.ಮಲ್ಹೋತ್ರಾ ಹೇಳಿದ್ದಾರೆ.

‘ಈ ಕುರಿತ ತಾಂತ್ರಿಕ ಕುರುಹುಗಳನ್ನು ಆತನ ಲ್ಯಾಪ್‌ಟಾಪ್‌ನಲ್ಲಿ ಪತ್ತೆಮಾಡಲಾಗಿದೆ. ಇಂಟರ್‌ನೆಟ್‌ ಪ್ರೊಟೊಕಾಲ್ ಡಿಟೇಲ್ ರೆಕಾರ್ಡ್ಸ್ (ಐಪಿಡಿಆರ್‌) ಹಾಗೂ ಇತರ ಗೇಟ್‌ವೇ ಬಳಸಿ ಪ್ರಕರಣದ ತಾಂತ್ರಿಕ ವಿಶ್ಲೇಷಣೆಯನ್ನೂ ಮಾಡಲಾಗಿದೆ’ ಎಂದು ಹೇಳಿದ್ದಾರೆ.

100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವ ಪ್ರಕರಣ ಇದಾಗಿದೆ.

ಸುದ್ದಿಪೋರ್ಟಲ್ ‘ದಿ ವೈರ್‌’ನ ಪತ್ರಕರ್ತೆ ಇಸ್ಮತ್ ಆರಾ ಎಂಬುವವರು ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಇನ್ನೊಂದೆಡೆ, ಮುಂಬೈ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

ಈ ಆ್ಯಪ್‌ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಕಠಿಣ ಕ್ರಮದ ಭರವಸೆ ನೀಡಿದರು. ನಂತರ ಆ್ಯಪ್‌ಅನ್ನು ನಿರ್ಬಂಧಿಸಲಾಯಿತು.

‘ಬುಲ್ಲಿ ಬಾಯಿ’ ಕೂಡ ‘ಸುಲ್ಲಿ ಡೀಲ್ಸ್’ ನಂತೆ ಗಿಟ್‌ಹಬ್‌ ವೇದಿಕೆಯ ಆ್ಯಪ್‌ ಆಗಿದ್ದು, ಇವುಗಳಲ್ಲಿ ಸಾಮ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿ ಪೊಲೀಸ್‌ನ ಸೈಬರ್‌ ಕ್ರೈಂ ವಿಭಾಗವು ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸಿ, ಈ ಆ್ಯಪ್‌ ಬಗ್ಗೆ ಮೊದಲು ಪೋಸ್ಟ್ ಮಾಡಿದ ವ್ಯಕ್ತಿಯ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT