ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಪೊಲೀಸರು ಚಿಕಿತ್ಸೆಗೆ ಕರೆ ತಂದಿದ್ದ ವ್ಯಕ್ತಿಯಿಂದಲೇ ಯುವ ವೈದ್ಯೆ ಹತ್ಯೆ

ವೈದ್ಯರಿಗಿಲ್ಲ ರಕ್ಷಣೆ– ಸರ್ಕಾರ, ಪೊಲೀಸ್‌ಗೆ ಕೇರಳ ಹೈಕೋರ್ಟ್‌ ತರಾಟೆ
Published 10 ಮೇ 2023, 19:40 IST
Last Updated 10 ಮೇ 2023, 19:40 IST
ಅಕ್ಷರ ಗಾತ್ರ

ಕೊಚ್ಚಿ: ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕಾರ ಪ್ರದೇಶದ ತಾಲ್ಲೂಕು ಆಸ್ಪತ್ರೆಯಲ್ಲಿ ಬುಧವಾರ ನಸುಕಿನಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ವ್ಯಕ್ತಿ ಕತ್ತರಿ ಮತ್ತು ಚಾಕುವಿನಿಂದ ದಾಳಿ ನಡೆಸಿ, 23 ವರ್ಷದ ವೈದ್ಯೆ ಡಾ. ವಂದನಾ ದಾಸ್‌ ಎಂಬುವವರನ್ನು ಹತ್ಯೆ ಮಾಡಿದ್ದಾನೆ.

ಈ ಹೃದಯ ವಿದ್ರಾವಕ ಘಟನೆಗೆ ತಕ್ಷಣ ಸ್ಪಂದಿಸಿರುವ ಕೇರಳ ಹೈಕೋರ್ಟ್‌, ‘ಇದು ವೈದ್ಯರಿಗೆ ರಕ್ಷಣೆ ನೀಡುವಲ್ಲಿನ ವೈಫಲ್ಯದ ಸಂಕೇತ’ ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯನ್ನು ತೀವ್ರ ತರಾಟೆ ತೆಗೆದುಕೊಂಡಿದೆ.   

ವೈದ್ಯೆ ಮೇಲೆ ದಾಳಿ ಮಾಡಿ ಕೊಂದಿರುವ ವ್ಯಕ್ತಿಯನ್ನು ಸಂದೀಪ್‌ ಎಂದು ಗುರುತಿಸಲಾಗಿದೆ. ಈತ ಶಾಲಾ ಶಿಕ್ಷಕ. ಸೇವೆಯಿಂದ ಅಮಾನತುಗೊಂಡಿದ್ದ. ಕುಟುಂಬದವರೊಂದಿಗೆ ಗಲಾಟೆ ಮಾಡಿಕೊಂಡು ಗಾಯಗೊಂಡಿದ್ದ ಈತನಿಗೆ ಚಿಕಿತ್ಸೆ ಕೊಡಿಸಲು ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ದರು.

ಕಾಲಿನ ಗಾಯಕ್ಕೆ ಶುಶ್ರೂಷೆ ಮಾಡುತ್ತಿದ್ದ 23 ವರ್ಷದ ಯುವ ವೈದ್ಯೆ ಡಾ. ವಂದನಾ ದಾಸ್ ಮೇಲೆ ಸಂದೀಪ್‌, ಇದ್ದಕ್ಕಿದ್ದಂತೆ ಕೋಪೋದ್ರಿಕ್ತನಾಗಿ ಕತ್ತರಿ ಮತ್ತು ಚಿಕ್ಕ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಅಲ್ಲದೆ, ಸಮೀಪದಲ್ಲಿ ನಿಂತಿದ್ದವರ ಮೇಲೂ ದಾಳಿ ಮಾಡಿದ್ದಾನೆ. ತೀವ್ರ ಗಾಯಗೊಂಡ ವೈದ್ಯೆಯನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವೇ ತಾಸುಗಳ ನಂತರ ವೈದ್ಯೆ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಕಾನ್ಸ್‌ಟೆಬಲ್‌ ಒಬ್ಬರು ಸಹ ವ್ಯಕ್ತಿಯ ಚಾಕು ದಾಳಿಯಲ್ಲಿ ಗಾಯಗೊಂಡಿದ್ದಾರೆ. 

ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ವೈದ್ಯರು, ರೋಗಿಗಳಿಗೆ ಚಿಕಿತ್ಸೆ ಸ್ಥಗಿತಗೊಳಿಸಿ ಮುಷ್ಕರ ಹೂಡಿದ್ದಾರೆ. ಈ ಘಟನೆಯ ನಂತರ ಭಾರತೀಯ ವೈದ್ಯಕೀಯ ಸಂಘ-ಕೇರಳ ಘಟಕ ಮತ್ತು ವೈದ್ಯರ ಇತರ ವೇದಿಕೆಗಳು ರೊಚ್ಚಿಗೆದ್ದಿವೆ. ಗುರುವಾರದವರೆಗೆ ಎಲ್ಲ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ವೈದ್ಯರು ನಿರ್ಧರಿಸಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ದೇವನ್‌ ರಾಮಚಂದ್ರನ್‌ ಮತ್ತು ಕೌಸರ್‌ ಎಡಪ್ಪಾಗಥ್‌ ಅವರಿದ್ದ ವಿಶೇಷ ನ್ಯಾಯ ಪೀಠವು, ‘ಈ ಹಿಂದೆಯೇ ಇಂತಹ ಘಟನೆ ನಡೆಯಬಹುದೆಂದು ನಾವು ಹೇಳಿದ್ದೆವು. ಈ ಘಟನೆಯಿಂದ ನಾವೂ ಭಯಗೊಂಡಿದ್ದೇವೆ. ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಮಾನಸಿಕ ಭೀತಿಯನ್ನು ಸೃಷ್ಟಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘ವೈದ್ಯರು ಮುಷ್ಕರ ಹೂಡಿದ್ದಾರೆ. ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ್ದಕ್ಕಾಗಿ ನೀವು ಯಾವ ಕಾರಣ ಕೊಡುತ್ತೀರಿ? ಮುಷ್ಕರದಿಂದಾಗಿ ಇಂದು ಯಾವುದೇ ರೋಗಿಗೆ ಉಂಟಾಗುವ ಯಾವುದೇ ಸಮಸ್ಯೆಗೆ ನೀವು ವೈದ್ಯರನ್ನು ದೂಷಿಸಬಹುದೇ’ ಎಂದು ವಿಶೇಷ ಪೀಠವು, ರಾಜ್ಯ ಸರ್ಕಾರವನ್ನೂ ಕಟುವಾಗಿ ಪ್ರಶ್ನಿಸಿದೆ.

‘ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಪೊಲೀಸರಿಗೆ ತರಬೇತಿ ಕೊಟ್ಟಿರುತ್ತದೆ. ಆದರೆ, ಅವರು ಯುವ ವೈದ್ಯೆಯನ್ನು ರಕ್ಷಿಸಲು ವಿಫಲವಾಗಿದ್ದಾರೆ. ಚಿಕಿತ್ಸೆ ಕೊಡಿಸುವುದಕ್ಕಷ್ಟೇ ಸೀಮಿತವಾಗುವುದಲ್ಲ. ನೀವು (ಪೊಲೀಸ್) ಆ ವ್ಯಕ್ತಿಯು ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಮೇಲೆ ಆತನನ್ನು ನಿಯಂತ್ರಿಸುವುದು ನಿಮ್ಮ ಜವಾಬ್ದಾರಿಯಾಗಿತ್ತು. ಇದು ವ್ಯವಸ್ಥೆಯ ಸಂಪೂರ್ಣ ವೈಫಲ್ಯ’ ಎಂದು ಪೀಠವು ಪೊಲೀಸರನ್ನೂ ತೀವ್ರ ತರಾಟೆ ತೆಗೆದುಕೊಂಡಿತು.

‘ನೀವು ಅನಿರೀಕ್ಷಿತವಾದುದನ್ನು ತಡೆಯಲು ಸಮರ್ಥರಿರಬೇಕೆನ್ನುವುದು ನಿರೀಕ್ಷಿತ. ಇಲ್ಲದಿದ್ದರೆ ಪೊಲೀಸರ ಅಗತ್ಯವೇ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲ ಸಮಯದಲ್ಲೂ ನಾವು ಎಲ್ಲವನ್ನೂ ಉಡಾಫೆಯಾಗಿ ತೆಗೆದುಕೊಳ್ಳುತ್ತೇವೆ. ಈ ವೈದ್ಯೆಯ ರಕ್ಷಣೆಯಲ್ಲಿ ನೀವು ವಿಫಲವಾಗಿಲ್ಲವೇ’ ಎಂದು ಪಶ್ನಿಸಿದ ಪೀಠವು, ಈ ಹಿಂದೆ ಇಂಥವು ಘಟಿಸದಿದ್ದರೂ ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿತ್ತಲ್ಲವೇ ಎಂದೂ ಪೊಲೀಸರ ವಿರುದ್ಧ ಹರಿಹಾಯ್ದಿದೆ. 

ವೈದ್ಯೆ ಅನನುಭವಿ ಎಂದ ಸಚಿವೆ

ತಿರುವನಂತಪುರ: ಅನನುಭವದಿಂದಾಗಿ ಯುವ ವೈದ್ಯೆ ಚಿಕಿತ್ಸೆ ನೀಡಲು ಹಿಂಜರಿದಿರಬಹುದು. ಇದರಿಂದ ಕ್ರೋಧಗೊಂಡ ರೋಗಿ ದಾಳಿ ನಡೆಸಿರಬಹುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಪ್ರತಿಕ್ರಿಯಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಸಚಿವೆಯ ಈ ಹೇಳಿಕೆ ಭಾರಿ ಟೀಕೆಗೂ ಗುರಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT