ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಐದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿರುವ ಕಿರಿಯ ವೈದ್ಯರನ್ನು ಮತ್ತೆ ಮಾತುಕತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಹ್ವಾನಿಸಿದ್ದಾರೆ.
ಇಂದು ಸಂಜೆ 5 ಗಂಟೆಗೆ ತಮ್ಮ ನಿವಾಸದಲ್ಲಿ ಮಾತುಕತೆಗೆ ಆಗಮಿಸುವಂತೆ ಕಿರಿಯ ವೈದ್ಯರ ನಿಯೋಗಕ್ಕೆ ಮಮತಾ ಆಹ್ವಾನ ನೀಡಿದ್ದಾರೆ.
‘ಐದನೇ ಮತ್ತು ಕೊನೆಯ ಬಾರಿಗೆ ಮುಖ್ಯಮಂತ್ರಿಗಳು ಮತ್ತು ನಿಮ್ಮ ಪ್ರತಿನಿಧಿಗಳ ನಡುವಿನ ಸಭೆಗಾಗಿ ನಾವು ನಿಮ್ಮನ್ನು ಸಂಪರ್ಕಿಸುತ್ತಿದ್ದೇವೆ. ನಿನ್ನೆ ನಮ್ಮ ಚರ್ಚೆಗೆ ಅನುಗುಣವಾಗಿ, ನಾವು ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗಿನ ಸಭೆಗೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಅವರ ಕಾಳಿಘಾಟ್‌ನಲ್ಲಿರುವ ನಿವಾಸದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬಹುದು’ ಎಂದು ಸರ್ಕಾರದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Kolkata rape case: CM Mamata Banerjee invites junior doctors for meeting today, calls it a final reach out
— ANI Digital (@ani_digital) September 16, 2024
Read @ANI Story | https://t.co/9bg49f49lB#MamataBanerjee #RGKarCase #DoctorsProtest pic.twitter.com/toYnzq6ixW
ಆದರೆ, ವೈದ್ಯರು ಮಾತ್ರ ಸಭೆಯ ನೇರ ಪ್ರಸಾರದ ತಮ್ಮ ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ.
‘ಸಭೆಯೆಲ್ಲಿ ಏನು ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಲಿ ಎಂಬ ಉದ್ದೇಶದಿಂದ ನೇರ ಪ್ರಸಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಅದರಿಂದ ಸರ್ಕಾರಕ್ಕಾಗುವ ಸಮಸ್ಯೆ ಏನು ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ನಮ್ಮ ಐದೂ ಬೇಡಿಕೆಗಳು ಸಮರ್ಥನೀಯವಾದವುಗಳು. ಜನರೂ ನಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಏಕೆಂದರೆ, ನಮ್ಮ ಹೋರಾಟದಲ್ಲಿ ರಾಜಕೀಯವಿಲ್ಲ. ಸರ್ಕಾರದ ಒತ್ತಡಕ್ಕೆ ನಾವು ಮಣಿದಿಲ್ಲ. ನಮ್ಮ ಬೇಡಿಕೆಗಳಿಗೆ ಒಪ್ಪದ ಹೊರತು ನಮ್ಮನ್ನು ಸಭೆಗೆ ಆಹ್ವಾನಿಸುವುದರಲ್ಲಿ ಅರ್ಥವೇ ಇಲ್ಲ’ ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದಾರೆ.
ಕೋಲ್ಕತ್ತದ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ಸ್ವಾಸ್ಥ್ಯ ಭವನದ ಎದುರು ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ.
ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜ್ಯದಲ್ಲಿ 29 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸೆಪ್ಟೆಂಬರ್ 13ರಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.