ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ಮೈತ್ರಿ ಚುನಾವಣಾ ಕಹಳೆ; ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

ಪಟ್ನಾದಲ್ಲಿ ಬೃಹತ್‌ ರ್‍ಯಾಲಿ
Published 3 ಮಾರ್ಚ್ 2024, 23:30 IST
Last Updated 3 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಪಟ್ನಾ: ರಾಹುಲ್‌ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಭಾನುವಾರ ಇಲ್ಲಿ ನಡೆದ ಬೃಹತ್‌ ರ್‍ಯಾಲಿಯಲ್ಲಿ ಪಾಲ್ಗೊಂಡು ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.

‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಗೆ ಅಲ್ಪವಿರಾಮ ಹಾಕಿ ಮಧ್ಯಪ್ರದೇಶದಿಂದ ಇಲ್ಲಿಗೆ ಬಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಜನ ವಿಶ್ವಾಸ್‌’ ರ್‍ಯಾಲಿಯನ್ನುದ್ದೇಶಿಸಿ 15 ನಿಮಿಷ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಮೋದಿ ನೇತೃತ್ವದ ಸರ್ಕಾರ ರೈತರು, ಯುವಜನರು ಮತ್ತು ಬಡವರಿಗೆ ಅನ್ಯಾಯ ಎಸಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವು 2–3 ಮಂದಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದ್ದು, ದೇಶದ ಜನಸಂಖ್ಯೆಯ ಶೇ 73 ರಷ್ಟಿರುವ ದಲಿತರು ಮತ್ತು ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ’ ಎಂದು ಟೀಕಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅತಿಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ಮತ್ತು ಐ.ಟಿ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿದೆ. ಆದರೆ ಕೇಂದ್ರದ ಬೆದರಿಕೆಗೆ ನಮ್ಮ ನಾಯಕರು ಮಣಿಯುವುದಿಲ್ಲ’ ಎಂದರು.

ದೇಶದ ಅಭ್ಯುದಯ ಮತ್ತು ಸಂವಿಧಾನದ ರಕ್ಷಣೆಗಾಗಿ ನರೇಂದ್ರ ಮೋದಿ ಸರಕಾರವನ್ನು ಈ ಬಾರಿ ಕೆಳಗಿಳಿಸಲೇಬೇಕು.
–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರು ತಮ್ಮ ಮಾತಿನುದ್ದಕ್ಕೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಪ್ರಧಾನಿ ಅವರ ಕಾಲೆಳೆದರು. ‘ಮುಂಬರುವ ಚುನಾವಣೆಗೆ ಸಿದ್ಧರಾಗಿ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ದೂರವಿಡಲು ನೀವು ಮತ ​​ಚಲಾಯಿಸುವಾಗ ಆತ್ಮಸ್ಥೈರ್ಯ ಹೆಚ್ಚಿಸಲು ನಾನೂ ನಿಮ್ಮೊಂದಿಗೆ ಇರುತ್ತೇನೆ’ ಎಂದರು.

ಬಿಜೆಪಿ ‘ಸುಳ್ಳಿನ ಕಾರ್ಖಾನೆ’: ಬಿಜೆಪಿಯನ್ನು ‘ಸುಳ್ಳಿನ ಕಾರ್ಖಾನೆ’ ಎಂದು ಟೀಕಿಸಿದ ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌, ‘ನಮ್ಮ ಪಕ್ಷವು ಹಕ್ಕುಗಳು, ಉದ್ಯೋಗ ಮತ್ತು ಅಭಿವೃದ್ಧಿ’ಯ ಪರವಾಗಿದೆ ಎಂದು ಹೇಳಿದರು.

‘ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತಾರೆ. ಆದರೆ ನಾವು ಬಿಹಾರ ಒಳಗೊಂಡಂತೆ ದೇಶದ ಜನರ ಹಕ್ಕುಗಳು ಮತ್ತು ಉದ್ಯೋಗಕ್ಕಾಗಿ ಹೋರಾಟ ಮಾಡುತ್ತೇವೆ’ ಎಂದರು.

ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್, ‘ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಒಟ್ಟು 120 ಲೋಕಸಭಾ ಕ್ಷೇತ್ರಗಳಿವೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿಯ ಪತನವನ್ನು ಖಚಿತಪಡಿಸಿದರೆ, ಅವರು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ನುಡಿದರು. 

ಎಡಪಕ್ಷಗಳ ಮುಖಂಡರಾದ ಸೀತಾರಾಮ್‌ ಯೆಚೂರಿ, ಡಿ.ರಾಜಾ ಮತ್ತು ದೀಪಾಂಕರ್‌ ಭಟ್ಟಾಚಾರ್ಯ ಅವರು ಪಾಲ್ಗೊಂಡರು.

‘ಮೋದಿ ನೈಜ ಹಿಂದೂ ಅಲ್ಲ’
ಪ್ರಧಾನಿ ನರೇಂದ್ರ ಮೋದಿ ಅವರು ‘ಕುಟುಂಬ ರಾಜಕಾರಣ’ ವಿಚಾರವಾಗಿ ವಿರೋಧ ಪಕ್ಷಗಳನ್ನು ಟೀಕಿಸುತ್ತಿರುವುದಕ್ಕೆ ತಿರುಗೇಟು ನೀಡಿದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ‘ಮೋದಿ ಅವರಿಗೆ ಕುಟುಂಬ ಇಲ್ಲದಿದ್ದರೆ ನಾವೇನು ಮಾಡಲು ಸಾಧ್ಯ?’ ಎಂದು ಲೇವಡಿ ಮಾಡಿದರು. ‘ಮೋದಿ ಅವರು ರಾಮಮಂದಿರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಅವರು ನೈಜ ಹಿಂದೂ ಅಲ್ಲ. ಏಕೆಂದರೆ ತಂದೆ ಅಥವಾ ತಾಯಿ ಮರಣ ಹೊಂದಿದಾಗ ಪುತ್ರನು ತನ್ನ ತಲೆ ಹಾಗೂ ಗಡ್ಡ ಬೋಳಿಸಿಕೊಳ್ಳುವುದು ಹಿಂದೂ ಸಂಪ್ರದಾಯಲ್ಲಿದೆ. ತಾಯಿ ನಿಧನರಾದಾಗ ಮೋದಿ ಹಾಗೆ ಮಾಡಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT