ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election 2024 | ಬಿಹಾರದ ಕಾಂಗ್ರೆಸ್‌ ಮುಖಂಡರ ಜೊತೆ ಹೈಕಮಾಂಡ್ ಚರ್ಚೆ

ಲೋಕಸಭಾ ಚುನಾವಣೆಗೆ ಸಿದ್ಧತೆ
Published 26 ಡಿಸೆಂಬರ್ 2023, 14:20 IST
Last Updated 26 ಡಿಸೆಂಬರ್ 2023, 14:20 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ವರಿಷ್ಠರು ಸಿದ್ಧತೆ ನಡೆಸಿದ್ದು, ’ಇಂಡಿಯಾ‘ ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆ, ರಾಜ್ಯಗಳಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ರಾಜ್ಯ ಘಟಕದ ಮುಖಂಡರೊಂದಿಗೆ ಚರ್ಚೆ ಆರಂಭಿಸಿದ್ದಾರೆ.

ಚುನಾವಣೆ ಎದುರಿಸಲು ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ಬಿಹಾರದ ಕಾಂಗ್ರೆಸ್‌ ಮುಖಂಡರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಮಂಗಳವಾರ ಚರ್ಚೆ ನಡೆಸಿದರು. ಆಂಧ್ರಪ್ರದೇಶದ ಕಾಂಗ್ರೆಸ್‌ ಮುಖಂಡರ ಜೊತೆಗೆ ಬುಧವಾರ ಸಭೆ ನಡೆಸಲಿದ್ದಾರೆ.

ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಸೇರಿದಂತೆ 40 ಮಂದಿ ಮುಖಂಡರ ಜೊತೆ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಜೆಡಿಯು ಮತ್ತು ಆರ್‌ಜೆಡಿ ಜೊತೆಗೆ ಸೀಟು ಹಂಚಿಕೆ ವಿಚಾರವಾಗಿ ಚರ್ಚಿಸುವಾಗ, ’ಕಾಂಗ್ರೆಸ್‌ಗೆ ಸೂಕ್ತ ಸಂಖ್ಯೆಯ’ ಸೀಟುಗಳನ್ನು ಕೇಳುವಂತೆ ಬಿಹಾರದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸೀಟು ಹಂಚಿಕೆ ವಿಚಾರವಾಗಿ ಮಾತನಾಡುವ ಮೊದಲು ರಾಜ್ಯದಲ್ಲಿ ಪಕ್ಷದ ನೆಲೆಗಟ್ಟು ಹೇಗಿದೆ ಎಂಬುದರ ಬಗ್ಗೆ ಹೇಳಿ ಎಂದು ರಾಹುಲ್‌ ಗಾಂಧಿ ಆವರು ಬಿಹಾರದ ಕಾಂಗ್ರೆಸ್‌ ಮುಖಂಡರಿಗೆ ಸೂಚಿಸಿದರು ಎನ್ನಲಾಗಿದೆ.

ಬಿಹಾರದಲ್ಲಿ ಕಾಂಗ್ರೆಸ್‌ ಸದ್ಯ ಒಂದು ಲೋಕಸಭಾ ಸ್ಥಾನವನ್ನು ಹೊಂದಿದೆ. ಜೆಡಿಯು–ಆರ್‌ಜೆಡಿಯು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೂರರಿಂದ ನಾಲ್ಕು ಸೀಟುಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂರು ಗಂಟೆಗಳ ಸಭೆಯ ಬಳಿಕ ಮಾತನಾಡಿದ ಅಖಿಲೇಶ್‌ ಪ್ರಸಾದ್‌ ಸಿಂಗ್‌, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಡಿಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

‘ಬಿಹಾರದಲ್ಲಿ ಮೈತ್ರಿ ಸರ್ಕಾರವು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT