ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಇಂಡಿಯಾ’ ಕೂಟ: ಮುಂದಿವೆ ಹಲವು ಸವಾಲು

ಮುನ್ನುಗ್ಗುವ ಟಿಎಂಸಿ, ಕಾದು ನೋಡುವ ಕಾಂಗ್ರೆಸ್, ಬಲ ಹೆಚ್ಚಿಸಿಕೊಂಡಿರುವ ಎಸ್‌ಪಿ ನಡುವೆ ಹೊಂದಾಣಿಕೆ ಸಾಧ್ಯವೇ?
Published 8 ಜೂನ್ 2024, 0:12 IST
Last Updated 8 ಜೂನ್ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯು ಎನ್‌ಡಿಎ ಕೂಟದ ಪ್ರಮುಖ ಮಿತ್ರಪಕ್ಷಗಳಿಂದ ಹಲವು ರೀತಿಯ ಒತ್ತಡಗಳನ್ನು ಎದುರಿಸುತ್ತಿದೆ. ಇಂಥ ಒತ್ತಡಗಳಿಂದ ಕಾಂಗ್ರೆಸ್ ಸಹ ಮುಕ್ತವೇನಲ್ಲ. ‘ಇಂಡಿಯಾ’ ಕೂಟದಲ್ಲಿಯೂ ಮಿತ್ರಪಕ್ಷಗಳ ನಡುವೆ ಹಲವು ಸಮಸ್ಯೆಗಳು ತಲೆದೋರಿವೆ.

ಲೋಕಸಭಾ ಚುನಾವಣೆಯ ನಂತರ ಬುಧವಾರ ನಡೆದ ಮೊದಲ ಸಭೆಯಲ್ಲಿ, ‘ಇಂಡಿಯಾ’ ಕೂಟದೊಳಗೇ ಪ್ರಮುಖರ ಗುಂಪೊಂದನ್ನು ರಚಿಸಿ, ಒಂದಷ್ಟು ಪಕ್ಷಗಳನ್ನು ಸೆಳೆದು, ಮೋದಿ ಸರ್ಕಾರವನ್ನು ಉರುಳಿಸುವುದಕ್ಕಾಗಿ ಕಾರ್ಯಪ್ರವೃತ್ತವಾಗುವ ಆಶಯವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವ್ಯಕ್ತಪಡಿಸಿತ್ತು. ಆ ಸಭೆ ‘ಇಂಡಿಯಾ’ ಕೂಟದಲ್ಲಿನ ಸಮಸ್ಯೆಗಳಿಗೆ ಕನ್ನಡಿ ಹಿಡಿಯಿತು.

‘ಇಂಡಿಯಾ’ ಕೂಟದ ಪಕ್ಷಗಳ ಪೈಕಿ ಕಾಂಗ್ರೆಸ್ ತನ್ನ ಬಲವನ್ನು ವೃದ್ಧಿಸಿಕೊಂಡಿದ್ದರೆ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಲೋಕಸಭೆಗೆ ಹಿಂದಿರುಗಿದ್ದಾರೆ. ಹಾಗೆಯೇ ಎನ್‌ಸಿಪಿ (ಶರದ್‌ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ 328 ಸ್ಥಾನಗಳಲ್ಲಿ ಸ್ವರ್ಧಿಸುವುದರೊಂದಿಗೆ ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆಯ ಮನೋಭಾವ ಪ್ರದರ್ಶಿಸಿದ ಕಾಂಗ್ರೆಸ್, ಮುಂದೆಯೂ ಅದೇ ರೀತಿ ವರ್ತಿಸುವುದೇ ಎನ್ನುವುದನ್ನು ‘ಇಂಡಿಯಾ’ ಕೂಟದ ಮಿತ್ರಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಇತರ ‌ವೇದಿಕೆಗಳಲ್ಲಿ ಸ್ಪರ್ಧೆಗಿಳಿದು ತನ್ನ ಬಲ ತೋರುವುದೇ ಎನ್ನುವ ಬಗ್ಗೆ ಮಿತ್ರಪಕ್ಷಗಳಿಗೆ ಇನ್ನೂ ಖಾತರಿ ಇಲ್ಲ. ಮುಂದಿನ ವರ್ಷದ ಆರಂಭದಲ್ಲಿ ಹರಿಯಾಣ, ಮಹಾರಾಷ್ಟ್ರ, ಜಮ್ಮು–ಕಾಶ್ಮೀರ ಮತ್ತು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಬುಧವಾರದ ಸಭೆಯಲ್ಲಿ, ಮೋದಿ ಅವರ ಸರ್ಕಾರವನ್ನು ಉರುಳಿಸುವ ದಿಸೆಯಲ್ಲಿ ‘ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯತಂತ್ರ’ ರೂಪಿಸುವ ಬಗ್ಗೆ ತೀರ್ಮಾನ ಮಾಡಲಾಯಿತು. ಆದರೆ, ಟಿಎಂಸಿಯಂತಹ ಪಕ್ಷಗಳು ‘ಸೂಕ್ತ ಸಮಯಕ್ಕಾಗಿ ಕಾಯುವ’ ಬಗ್ಗೆ ಅಸಮ್ಮತಿ ಸೂಚಿಸಿವೆ.

ಮೂವರು ಬಿಜೆಪಿ ಸಂಸದರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರೋಧಿ ಒಕ್ಕೂಟದ ಪ್ರಮುಖ ನಾಯಕರಿಗೆ ತಿಳಿಸಿದರು. ಆದರೆ, ಪರ್ಯಾಯ ಸರ್ಕಾರ ರಚನೆಯ ಬಗ್ಗೆ ಆತುರ ಪಡುವುದು ಬೇಡ ಎಂದು ವಿರೋಧಿ ಬಣದ ನಾಯಕರು ಒಕ್ಕೊರಲಿನಿಂದ ಹೇಳಿದರು.

ಅಷ್ಟಕ್ಕೇ ಸುಮ್ಮನಾಗದ ಅಭಿಷೇಕ್ ಬ್ಯಾನರ್ಜಿ, ಮುಂಬೈಗೆ ಹೋಗಿ ಉದ್ಧವ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ, ಗುರುವಾರ ಅಖಿಲೇಶ್ ಮತ್ತು ಎಎಪಿಯ ಸಂಜಯ್ ಸಿಂಗ್ ಹಾಗೂ ರಾಘವ್ ಚಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಹಿರಿಯ ಮುಖಂಡರೊಬ್ಬರು, ‘ಟಿಎಂಸಿ ಮತ್ಯಾರದೋ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಕೂರಲು ಬಯಸುವುದಿಲ್ಲ’ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 2019ರಲ್ಲಿ ಗೆದ್ದಿದ್ದಕ್ಕಿಂತ ಏಳು ಸ್ಥಾನಗಳನ್ನು (ಒಟ್ಟು 29 ಸ್ಥಾನ) ಹೆಚ್ಚಿಗೆ ಗೆದ್ದಿರುವ ಟಿಎಂಸಿ, ಕಾಂಗ್ರೆಸ್ ಪಕ್ಷದ ಮಾತಿಗೆ ಕಿವಿಗೊಡುವ ಮನಸ್ಥಿತಿಯಲ್ಲಿ ಇಲ್ಲ.

ಉತ್ತರ ಪ್ರದೇಶದಲ್ಲಿ ರಾಹುಲ್ ಅವರ ಜತೆಗೂಡಿ ವ್ಯಾಪಕ ಪ್ರಚಾರ ಮಾಡಿ, ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು, ಸಂಸತ್ತಿನಲ್ಲಿ ಹಿಂದಿನ ಐದು ಸ್ಥಾನಗಳಿಂದ 37 ಸ್ಥಾನಗಳಿಗೆ ಬಲ ಹೆಚ್ಚಿಸಿಕೊಂಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಷ್ಟ್ರ ಮಟ್ಟದಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ಕೂಡ ನೋಡಬೇಕಿದೆ.

ಮುಂದಿನ ವರ್ಷ ದೆಹಲಿಯಲ್ಲಿ ಚುನಾವಣೆ ನಡೆಯುವುದರಿಂದ ಎಎಪಿ ಕೂಡ ಕಾಂಗ್ರೆಸ್ ಪಾಲಿಗೆ ತೊಡಕಾಗುವ ಲಕ್ಷಣಗಳಿವೆ. ದೆಹಲಿ ಮತ್ತು ಹರಿಯಾಣದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಈಗಾಗಲೇ ಎಎಪಿ ಸೂಚನೆ ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಬಿಟ್ಟುಕೊಟ್ಟಿರುವಂತೆ, ಎಎಪಿಗೆ ಯಾವುದೇ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇಲ್ಲ. 

ಜಮ್ಮು–ಕಾಶ್ಮೀರದ ವಿಧಾನಸಭಾ ಚುನಾವಣೆಯ ಬಗ್ಗೆ ‘ಇಂಡಿಯಾ’ ಕೂಟವು ಹೆಚ್ಚು ಗಮನಹರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಮಾತಿಗೆ ಕಟ್ಟುಬಿದ್ದು ಮೆಹಬೂಬಾ ಮುಫ್ತಿ ಅವರ ಪಿಡಿಪಿಯನ್ನು ಮೈತ್ರಿಕೂಟದಿಂದ ಹೊರಗಿಡಲಾಗಿತ್ತು. ಆದರೆ, ಚುನಾವಣೆಯಲ್ಲಿ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಇಬ್ಬರೂ ಸೋತಿದ್ದಾರೆ. 

‌ಅಖಿಲೇಶ್ ಯಾದವ್
‌ಅಖಿಲೇಶ್ ಯಾದವ್
‘ಇಂಡಿಯಾ’ ಕೂಟಕ್ಕೆ ‘ಮಹಾ’ ಸಂಕಟ 
ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನು ಕೇಳುವ ಸಂಭವವಿದೆ. ಆಗ ಲೋಕಸಭಾ ಚುನಾವಣೆಯಲ್ಲಿ ನಡೆದ ರೀತಿಯಲ್ಲಿಯೇ ಸೀಟು ಹಂಚಿಕೆಯ ವಿಚಾರದಲ್ಲಿ ದೀರ್ಘ ಮಾತುಕತೆಗಳು ನಡೆಯಲಿವೆ. ಇನ್ನೊಂದೆಡೆ ಶಿವಸೇನಾ (ಯುಬಿಟಿ) ಮತ್ತು ಎನ್‌ಸಿಪಿ (ಶರದ್‌ ಪವಾರ್ ಬಣ) ತಮ್ಮ ಪಕ್ಷ ಬಿಟ್ಟು ಹೊರಹೋಗಿದ್ದವರನ್ನು ಮತ್ತೆ ಸೆಳೆಯುವ ಪ್ರಯತ್ನದಲ್ಲಿದ್ದು ಈಗಾಗಲೇ ಹಲವರು ಉದ್ಧವ್ ಹಾಗೂ ಶರದ್ ಪವಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರಿಂದಾಗಿ ‘ಇಂಡಿಯಾ’ ಕೂಟಕ್ಕೆ ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳು ತುಂಬಾ ಸವಾಲಿನದ್ದಾಗಿರಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT