ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಸ್ಪೀಕರ್‌ ಮಗನಿಗೆ ಬಿಜೆಪಿ ಟಿಕೆಟಿಲ್ಲ

ಮಧ್ಯಪ್ರದೇಶ ವಿಧಾನಸಭಾ ಕಣ: ವಂಶ ರಾಜಕಾರಣಕ್ಕಾಗಿ ಸುಮಿತ್ರಾ ಮಹಾಜನ್‌– ವಿಜಯವರ್ಗೀಯ ಮೇಲಾಟ
Last Updated 8 ನವೆಂಬರ್ 2018, 19:15 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಮಗ ಮಂದರ್‌ ಮಹಾಜನ್‌ಗೆ ಮಧ್ಯ ಪ್ರದೇಶದ ಇಂದೋರ್‌–3ನೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ಬಿಜೆಪಿಯ ಪ್ರಭಾವಿ ಮುಖಂಡ ಕೈಲಾಸ್‌ ವಿಜಯವರ್ಗೀಯ ಅವರ ಮಗ ಆಕಾಶ್‌ ವಿಜಯವರ್ಗೀಯ ಅವರು ಈ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ಮುಖಂಡ ಬಾಬುಲಾಲ್‌ ಗೌರ್‌ ಅವರ ಸೊಸೆ ಕೃಷ್ಣಾ ಗೌರ್‌ ಅವರಿಗೆ ಗೋವಿಂದಪುರ ಕ್ಷೇತ್ರದಿಂದ ಟಿಕೆಟ್‌ ಕೊಡಲಾಗಿದೆ.

ಮಧ್ಯ ಪ್ರದೇಶದ 32 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. 231 ಕ್ಷೇತ್ರಗಳಿರುವ ಇಲ್ಲಿನ ವಿಧಾನಸಭೆಗೆ ನವೆಂಬರ್‌ 28ರಂದು ಮತದಾನ ನಡೆಯಲಿದೆ. 194 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಮಂದರ್‌ಗೆ ಟಿಕೆಟ್‌ ಇಲ್ಲ ಎಂಬುದು ಪಕ್ಷದ ವಲಯದಲ್ಲಿಯೇ ಅಚ್ಚರಿಗೆ ಕಾರಣವಾಗಿದೆ. ಸುಮಿತ್ರಾ ಮತ್ತು ವಿಜಯವರ್ಗೀಯ ನಡುವಣ ಹಗ್ಗಜಗ್ಗಾಟದಲ್ಲಿ ವಿಜಯವರ್ಗೀಯ ಗೆದ್ದಿದ್ದಾರೆ. ಸುಮಿತ್ರಾ ಅವರು ಬಹಳ ಹಿಂದಿನಿಂದಲೂ ಆರ್‌ಎಸ್‌ಎಸ್‌ನ ನಿಷ್ಠಾವಂತೆ. ಮಧ್ಯ ಪ್ರದೇಶ ಬಿಜೆಪಿಯ ಅತ್ಯಂತ ಹಿರಿಯ ನಾಯಕಿ. ಇಂದೋರ್‌ ಲೋಕಸಭಾ ಕ್ಷೇತ್ರದಿಂದ ಅವರು 1989ರಿಂದ ಎಂಟು ಬಾರಿ ಆಯ್ಕೆಯಾಗಿದ್ದಾರೆ.

ಮಂದರ್‌ ಅವರು ಪೈಲಟ್‌ಗಳ ತರಬೇತಿದಾರ. ರಾಜಕೀಯ ಪ್ರವೇಶಿಸಬೇಕು ಎಂಬ ಉತ್ಸಾಹ ಅವರಲ್ಲಿ ಹಿಂದಿನಿಂದಲೇ ಇತ್ತು. ಹಾಗಾಗಿ ಈ ಬಾರಿ ಇಂದೋರ್‌–3ನೇ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ, ವಿಜಯವರ್ಗೀಯ ಅವರು ತಮ್ಮ ಮಗ ಆಕಾಶ್‌ನನ್ನು ಈ ಬಾರಿಯೇ ಕಣಕ್ಕೆ ಇಳಿಸಲು ಮುಂದಾಗಿದ್ದು ಮಂದರ್‌ಗೆ ಮುಳುವಾಯಿತು.

ವಿಜಯವರ್ಗೀಯ ಅವರು ನಿರಂತರವಾಗಿ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದವರು.ಬಿಜೆಪಿಯ ಕೇಂದ್ರ ನಾಯಕತ್ವದ ಭಾಗವಾಗುವ ಮೊದಲು 12 ವರ್ಷ ಅವರು ಮಧ್ಯಪ್ರದೇಶದಲ್ಲಿ ಸಚಿವರಾಗಿದ್ದರು.

ಇಂದೋರ್‌–2ನೇ ವಿಧಾನಸಭಾ ಕ್ಷೇತ್ರದಿಂದ ಮಗನನ್ನು ಕಣಕ್ಕಿಳಿಸಲು ವಿಜಯವರ್ಗೀಯ ಬಯಸಿದ್ದರು. ಸತತ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ರಮೇಶ್‌ ಮೆಂಡೋಲಾ ಅವರಿಗೆ ಇಂದೋರ್‌–3ನೇ ಕ್ಷೇತ್ರದ ಟಿಕೆಟ್‌ ಕೊಟ್ಟು ಇಂದೋರ್‌–2ನೇ ಕ್ಷೇತ್ರವನ್ನು ತಮ್ಮ ಮಗನಿಗೆ ನೀಡಬೇಕು ಎಂಬುದು ವಿಜಯವರ್ಗೀಯ ಬೇಡಿಕೆಯಾಗಿತ್ತು.

ಸುಮಿತ್ರಾ ಮತ್ತು ವಿಜಯವರ್ಗೀಯ ಅವರು ಇಂದೋರ್‌ನ ಕ್ಷೇತ್ರಗಳಿಗೆ ಪಟ್ಟು ಹಿಡಿದ ಕಾರಣ ಇಲ್ಲಿನ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿತ್ತು. ಈ ಇಬ್ಬರು ಪ್ರಭಾವಿ ಮುಖಂಡರು ತಮ್ಮ ಮಕ್ಕಳ ಪರವಾಗಿ ಮಾತ್ರವಲ್ಲದೆ, ತಮಗೆ ನಿಷ್ಠರಾದವರ ಪರವಾಗಿಯೂ ಲಾಬಿಗೆ ಇಳಿದದ್ದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ಈ ಸಂಘರ್ಷದಲ್ಲಿ ವಿಜಯವರ್ಗೀಯ ಕೈಮೇಲಾಗಿದೆ.

**

ಚೌಹಾಣ್‌ ಭಾವನಿಗೆ ‘ಕೈ’ ಟಿಕೆಟ್‌

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಭಾವ ಸಂಜಯ್‌ ಸಿಂಗ್‌ ಮಸಾನಿ ಅವರಿಗೆ ವರ್ಷೋನಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಬಿಜೆಪಿ ತೊರೆದು ಅವರು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದರು.

ಈ ಹಿಂದಿನ ಎರಡು ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಟಿಕೆಟ್‌ ಪಡೆಯಲು ಮಸಾನಿ ಯತ್ನಿಸಿದ್ದರು. ಆದರೆ, ಟಿಕೆಟ್‌ ಪಡೆಯುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಬಿಜೆಪಿಯ ಯೋಗೇಂದ್ರ ನಿರ್ಮಲ್‌ ಅವರು ಈಗ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

**

ಟಿಕೆಟ್‌ ಇಲ್ಲ ಎಂದು ಅತ್ತ ಮುಖಂಡ

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿಯೂ ಹೆಸರಿಲ್ಲದ್ದು ನೋಡಿ ಹಿರಿಯ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಸರ್ತಾಜ್‌ ಸಿಂಗ್‌ ಅವರು ಬಹಿರಂಗವಾಗಿಯೇ ಅತ್ತರು.

ಹೋಷಂಗಾಬಾದ್‌ ಜಿಲ್ಲೆಯ ಸೋನಿ–ಮಾಲ್ವಾ ಕ್ಷೇತ್ರದಿಂದ ಸಿಂಗ್‌ (77) ಎರಡು ಬಾರಿ ಗೆದ್ದಿದ್ದಾರೆ.

ತಮ್ಮ ಬೆಂಬಲಿಗರ ಜತೆಗೆ ಕುಳಿತಿದ್ದ ಸಿಂಗ್‌ ಅವರು ಮುಖ ಮುಚ್ಚಿ ಹಿಡಿದು ತಮ್ಮ ದುಃಖವನ್ನು ಮರೆಮಾಚಲು ಯತ್ನಿಸಿದರು. ಕೊನೆಗೆ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತರು.

ಅವರು ಮಧ್ಯ ಪ್ರದೇಶದ ಲೋಕೋಪಯೋಗಿ ಸಚಿವರಾಗಿದ್ದರು. ಆದರೆ, ವಯಸ್ಸಾಯಿತು ಎಂಬ ಕಾರಣಕ್ಕೆ 2016ರ ಜೂನ್‌ನಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ಬೆಂಬಲಿಗರ ಜತೆಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಿಂಗ್‌ ಹೇಳಿದ್ದಾರೆ.

‘ವಾನಪ್ರಸ್ಥದ ಬದಲು ಗೃಹಸ್ಥಾಶ್ರಮದಲ್ಲಿಯೇ ಉಳಿಯಲುಅವರು ಬಯಸಿದ್ದಾರೆ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಒಂದು ಬಾರಿ ಅವರು ಕೇಂದ್ರ ಸಚಿವರಾಗಿದ್ದರು, ಎರಡು ಬಾರಿ ಮಧ್ಯ ಪ್ರದೇಶದಲ್ಲಿ ಸಚಿವರಾಗಿದ್ದರು’ಎಂದು ಬಿಜೆಪಿ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.

**

ತೆಲಂಗಾಣ: ಮಹಾಮೈತ್ರಿ ಸೀಟು ಹಂಚಿಕೆ ಅಂತಿಮ

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಯ ಪಕ್ಷಗಳ ನಡುವಣ ಸೀಟು ಹಂಚಿಕೆ ಅಂತಿಮವಾಗಿದೆ.

ಕಾಂಗ್ರೆಸ್‌ ಪಕ್ಷವು 94 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮೈತ್ರಿಕೂಟದ ಇತರ ಪಕ್ಷಗಳಿಗೆ 25 ಕ್ಷೇತ್ರಗಳು ದೊರೆಯಲಿವೆ.14ರಲ್ಲಿ ತೆಲುಗು ದೇಶಂ, ಎಂಟರಲ್ಲಿ ತೆಲಂಗಾಣ ಜನ ಸಮಿತಿ ಮತ್ತು ಮೂರರಲ್ಲಿ ಸಿಪಿಐ ಸ್ಪರ್ಧಿಸಲಿವೆ.

ವಾಸ್ತವದಲ್ಲಿ ಕಾಂಗ್ರೆಸ್‌ಗೆ 93 ಕ್ಷೇತ್ರಗಳಷ್ಟೇ ಸಿಗಲಿವೆ. ತೆಲಂಗಾಣ ಇಂತಿ ಪಕ್ಷದ ಅಧ್ಯಕ್ಷ ಚೆರುಕು ಸುಧಾಕರ್‌ಗೆ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಈಗಾಗಲೇ ಬಿಟ್ಟುಕೊಟ್ಟಿದೆ. ಚೆರುಕು ಅವರ ಪಕ್ಷಕ್ಕೆ ಚುನಾವಣಾ ಆಯೋಗವು ಇನ್ನೂ ಚಿಹ್ನೆಯನ್ನು ನೀಡಿಲ್ಲ. ಹಾಗಾಗಿ ಅವರು ಕಾಂಗ್ರೆಸ್‌ನ ಚಿಹ್ನೆಯ ಅಡಿಯಲ್ಲಿಯೇ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT