ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ| ವಿಠ್ಠಲನ ಭಕ್ತರು – ಪೊಲೀಸರ ನಡುವೆ ವಾಗ್ವಾದ: ಲಾಠಿಚಾರ್ಜ್‌ ಆಗಿದೆ ಎಂದು ಆರೋಪ

Published 12 ಜೂನ್ 2023, 4:07 IST
Last Updated 12 ಜೂನ್ 2023, 4:07 IST
ಅಕ್ಷರ ಗಾತ್ರ

ಮುಂಬೈ: ವಿಠ್ಠಲ ದೇವರ ಭಕ್ತರಾದ ವಾರಕರಿಗಳು ಮತ್ತು ಪೊಲೀಸರ ನಡುವೆ ಪುಣೆಯಲ್ಲಿ ಭಾನುವಾರ ವಾಗ್ವಾದ ನಡೆದಿದೆ. ಘಟನೆ ಸದ್ಯ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಮಹಾರಾಷ್ಟ್ರ ಸರ್ಕಾರ ಭಕ್ತರ ಮೇಲೆ ಲಾಠಿಚಾರ್ಜ್‌ ನಡೆಸಿದೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಆರೋಪಿಸಿದೆ.

ಭಕ್ತರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವುದು, ನೂಕಾಟ ತಳ್ಳಾಟ ನಡೆಯುವುದು, ಕೊನೆಗೆ ಕೆಲವರ ಮೇಲೆ ಪೊಲೀಸ್‌ ಸಿಬ್ಬಂದಿ ಲಾಠಿ ಬೀಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಿಂದ ಬಹಿರಂಗವಾಗಿದೆ. ‌ಆದರೆ, ಭಕ್ತರ ಮೇಲೆ ಲಾಠಿಚಾರ್ಜ್ ಆಗಿಲ್ಲ ಎಂದು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ವಾರಕರಿಗಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಗೃಹ ಸಚಿವ ದೇವೇಂದ್ರ ಫಡಣವೀಸ್‌ ರಾಜೀನಾಮೆ ನೀಡಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.

ಪ್ರತಿವರ್ಷ ಪಂಢರಾಪುರಕ್ಕೆ ಆಷಾಧಿ ಏಕಾದಶಿ ಯಾತ್ರೆ ಹಮ್ಮಿಕೊಳ್ಳುವ ವಾರಕರಿಗಳು, ಅದರ ಭಾಗವಾಗಿ ಪುಣೆಯ ಆಳಂದಿ ಪಟ್ಟಣದಲ್ಲಿರುವ ಸಂತ ಜ್ಞಾನೇಶ್ವರ ಮಹಾರಾಜರ ಮಂದಿರಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಗಲಾಟೆ ನಡೆದಿದೆ.

‘ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಟ್ರಸ್ಟಿಗಳೊಂದಿಗೆ ಚರ್ಚಿಸಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು. ಒಂದು ಬಾರಿಗೆ 75 ಭಕ್ತರನ್ನು ಮಂದಿರದ ಒಳಗೆ ಕಳುಹಿಸಲಾಗುತ್ತಿತ್ತು. ಈ ವೇಳೆ ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ದೇವಸ್ಥಾನಕ್ಕೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ ವಾಗ್ವಾದ ನಡೆಯಿತು’ ಎಂದು ಪಿಂಪ್ರಿ ಚಿಂಚ್‌ವಾಡದ ಕಮಿಷನರ್ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ.

ಪೊಲೀಸರು ವಾರಕರಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಆರೋಪವನ್ನು ಅವರು ನಿರಾಕರಿಸಿದರು.

ಲಾಠಿಚಾರ್ಜ್ ನಡೆದಿದೆ ಎಂದು ಪ್ರತಿಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ಆರೋಪಿಸಿವೆ.

‘ಮಾರ್ಚ್‌ನಿಂದ ರಾಜ್ಯದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ವಾತಾವರಣವಿದೆ. ಇಂದು ಅಳಂದಿಯಲ್ಲಿ ವಾರಕರಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಇದು ನಾಚಿಕೆಗೇಡಿನ ಸಂಗತಿ. ದೇವೇಂದ್ರ ಫಡಣವೀಸ್‌ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT