ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಬಸ್ಸು ದುರಂತ: ಸಹಾಯ ಕೇಳಿದ್ರೂ ವಾಹನ ನಿಲ್ಲಿಸದೇ ಹೋದರು: ಬದುಕುಳಿದವರ ಅಳಲು

Published 1 ಜುಲೈ 2023, 10:39 IST
Last Updated 1 ಜುಲೈ 2023, 10:39 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಬುಲ್ಧಾನ್‌ ಜಿಲ್ಲೆಯ ಸಮೃದ್ದಿ ಎಕ್ಸ್‌ಪ್ರೆಸ್‌ ವೇನಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿ 25 ಮಂದಿ ಸಜೀವ ದಹನಗೊಂಡಿದ್ದರು. ದುರಂತದಲ್ಲಿ ಬದುಕುಳಿದ ಪ್ರಯಾಣಿಕರೊಬ್ಬರು ದುರಂತದಿಂದ ಪಾರಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ.

ಶುಕ್ರವಾರ ತಡರಾತ್ರಿ ಖಾಸಗಿ ಬಸ್‌ವೊಂದು ನಾಗ್ಪುರದಿಂದ ಪುಣೆಗೆ ಸಂಚರಿಸುತ್ತಿತ್ತು. ರಾತ್ರಿ 1.30ರ ವೇಳೆ ಬಸ್ಸಿನ ಟೈರ್‌ ಪಂಚರ್‌ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಕಣ್ಣುಚ್ಚಿ ತೆರೆಯುವುದರೊಳಗೆ ಇಡೀ ಬಸ್‌ ಹೊತ್ತಿ ಉರಿಯಿತು.

‘ಅಪಘಾತವಾದಾಗ ನಾನು ಮತ್ತು ನನ್ನ ಸಹ ಪ್ರಯಾಣಿಕ ಅಲ್ಲಿಂದ ಹೊರ ಬರಲು ಯತ್ನಿಸಿದೆವು. ನಾವು ಕುಳಿತ ಜಾಗದ ಕಿಟಕಿಯ ಗಾಜು ಒಡೆಯುಲು ಪ್ರಯತ್ನಿಸಿದೆವು . ಆದರೆ ಅದು ಆಗಲಿಲ್ಲ. ತಕ್ಷಣ ಹಿಂಬದಿ ಕಿಟಕಿಯ ಗಾಜು ಹೊಡೆದು ಹೊರಬಂದೆವು. ನಮ್ಮಂತೆ ಇನ್ನು ನಾಲ್ಕೈದು ಜನರ ಕಿಟಕಿ ಗಾಜು ಒಡೆದು ದುರಂತದಿಂದ ಪಾರಾದರು. ಉಳಿದವರು ಸಜೀವವಾಗಿ ದಹನವಾದರು‘ ಎಂದು ದುರಂತದಿಂದ ಪಾರಾದ ಪ್ರಯಾಣಿಕ ಯೋಗೀಶ್ ರಾಮದಾಸ್ ಗವಾಯಿ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

‘ಬಸ್ಸಿನ ತುಂಬಾ ಕಿರಿಚಾಟ ಕೇಳಿ ಬರುತ್ತಿತ್ತು. ಸಹಾಯಕ್ಕಾಗಿ ಜನರು ಅಂಗಲಾಚುತ್ತಿದ್ದರು. ನಾವು ರಸ್ತೆಗಿಳಿದು ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದೇವು. ಯಾರೊಬ್ಬರು ವಾಹನ ನಿಲ್ಲಿಸಿ ಸಹಾಯಕ್ಕೆ ಧಾವಿಸಲಿಲ್ಲ. ನನ್ನ ಕಣ್ಣೆದುರೆ ಜನರು ಸಾಯುತ್ತಿರುವುದನ್ನು ಕಂಡು ದುಃಖವಾಯಿತು‘ ಎಂದು ಭಾವುಕರಾದರು.

‘ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬರುವಾಗ ಎಲ್ಲವೂ ಮುಗಿದಿತ್ತು. ಬೆಂಕಿ ಇಡೀ ಬಸ್‌ಗೆ ಆವರಿಸಿತ್ತು‘ ಎಂದು ವಿಷಾದ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣ ದುರಂತಕ್ಕೆ ಕಾರಣವಲ್ಲ: ಫಡಣವೀಸ್‌

ರಸ್ತೆ ನಿರ್ಮಾಣವೇ ಬಸ್‌ ದುರಂತಕ್ಕೆ ಕಾರಣ ಎಂಬ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ರಸ್ತೆ ನಿರ್ಮಾಣಕ್ಕೂ ಬಸ್ಸು ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ‘ ಎಂದು ಹೇಳಿದ್ದಾರೆ.

ಟಯರ್‌ ಸ್ಪೋಟದಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಆತ ಅನುಭವಿ ಚಾಲಕ: ಬಸ್‌ ಮಾಲೀಕ ವಿರೇಂದ್ರ ದಾರ್ನಾ

ನಾವು 2020ರಲ್ಲಿ ಈ ಬಸ್ಸನ್ನು ಖರೀದಿಸಿದ್ದೇವೆ. ಬಸ್‌ ಚಾಲಕ ಡ್ಯಾನಿಶ್ ಒಬ್ಬ ಅನುಭವಿ ಚಾಲಕರಾಗಿದ್ದಾರೆ. ಟೈರ್‌ ಸ್ಪೋಟಗೊಂಡು ಬಸ್ಸು ಡಿವೈಡರ್‌ಗೆ ಹೊಡೆದಿದೆ. ಅಲ್ಲದೇ ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದ ಕೆಲವು ವಸ್ತಗಳು(flammable items) ಬೆಂಕಿ ವ್ಯಾಪಿಸಲು ಕಾರಣವಾಗಿವೆ. ಇದರಲ್ಲಿ ಚಾಲಕನದ್ದು ಯಾವುದೇ ತಪ್ಪಿಲ್ಲ‘ ಎಂದು ಹೇಳಿದರು.

ಸಂತಾ‍ಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಕ್ರಮವಾಗಿ ₹2 ಲಕ್ಷ ಮತ್ತು ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT