ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠ ಮೀಸಲಾತಿ: ಕುಂಬಿಗಳಿಗೆ ಜಾತಿ ಪ್ರಮಾಣ ಪತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಅಸ್ತು

ರಾಜಭವನ ಮುಂಭಾಗ ಮೂವರು ಶಾಸಕರ ಪ್ರತಿಭಟನೆ
Published 31 ಅಕ್ಟೋಬರ್ 2023, 14:48 IST
Last Updated 31 ಅಕ್ಟೋಬರ್ 2023, 14:48 IST
ಅಕ್ಷರ ಗಾತ್ರ

ಮುಂಬೈ: ನಿಜಾಮರ ಕಾಲದ ದಾಖಲೆಗಳಲ್ಲಿ ‘ಕುಂಬಿ’ ಎಂದು ಉಲ್ಲೇಖಿಸಿರುವ ಮರಾಠವಾಡ ಪ್ರದೇಶದಲ್ಲಿರುವ ಮರಾಠ ಸಮುದಾಯಕ್ಕೆ ಸೇರಿದ ಈ ಉಪ ವರ್ಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮುಖಂಡ ಮನೋಜ್‌ ಜಾರಂಗೆ ನಡೆಸುತ್ತಿರುವ ಹೋರಾಟವು ಹಿಂಸಾ ಸ್ವರೂಪ ಪಡೆದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.

ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂದೆ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ಮೊದಲ ವರದಿಯನ್ನು ಸರ್ಕಾರ ಅಂಗೀಕರಿಸಿದೆ.

‘ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಗೊಂಡಿದೆ’ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಲಾಯಿತು. 

ಮರಾಠರ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಹೊಸದಾಗಿ ಮಾಹಿತಿ ಸಂಗ್ರಹಿಸಲು ಸಂಪುಟ ಒಪ್ಪಿಗೆ ನೀಡಿದೆ.

ಅಲ್ಲದೇ, ಮೀಸಲಾತಿ ಸಂಬಂಧ ಎದುರಾಗುವ ಕಾನೂನು ತೊಡಕುಗಳ ಬಗ್ಗೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ನಿವೃತ್ತ ನ್ಯಾಯಮೂರ್ತಿ ದಿಲೀಪ್‌ ಭೋಸಲೆ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆಗೆ ನಿರ್ಧರಿಸಿದೆ. 

ಮೀಸಲಾತಿ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಸಂಬಂಧ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ರಾಜಭವನದ ಮುಂಭಾಗ ಮೂವರು ಶಾಸಕರು ಪ್ರತಿಭಟನೆ ನಡೆಸಿದರು.

ರಾಜ್ಯಭವನ ಮುಂಭಾಗ ಶಾಸಕರ ಪ್ರತಿಭಟನೆ: ಅಜಿತ್‌ ಪವಾರ್ ಬಣಕ್ಕೆ ಸೇರಿದ ಶಾಸಕರಾದ ನೀಲೇಶ್ ಲಂಕೆ, ರಾಜು ನವಘರೆ ಹಾಗೂ ಶಿವಸೇನಾ (ಯುಬಿಟಿ) ಶಾಸಕ ಕೈಲಾಸ್‌ ಪಾಟೀಲ್‌ ಇದಕ್ಕೂ ಮೊದಲು ರಾಜ್ಯ ಸಚಿವಾಲಯದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ರಾಜಭವನದ ಆಹ್ವಾನದ ಮೇಲೆ ಒಳಕ್ಕೆ ತೆರಳಿದ ಶಾಸಕರು, ರಾಜ್ಯಪಾಲ ರಮೇಶ್‌ ಬೈಸ್‌ ಅವರೊಟ್ಟಿಗೆ ಚರ್ಚಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೀಲೇಶ್ ಲಂಕೆ, ‘ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಮೀಸಲಾತಿ ಮಸೂದೆ ಮಂಡನೆಗೆ ಒಪ್ಪಿಗೆ ಪಡೆಯಲು ಒಂದು ದಿನದ ಮಟ್ಟಿಗೆ ವಿಶೇಷ ಅಧಿವೇಶನ ಕರೆಯುವಂತೆ ಕೋರಿದ್ದೇವೆ’ ಎಂದರು.

ಜಾರಂಗೆ ಜತೆ ಸಿ.ಎಂ ಚರ್ಚೆ: ಹೋರಾಟನಿರತ ಜಾರಂಗೆ ಅವರ ಜತೆ ಮುಖ್ಯಮಂತ್ರಿ ಶಿಂದೆ ಮೊಬೈಲ್‌ನಲ್ಲಿ ಮಾತುಕತೆ ನಡೆಸಿದರು. ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯಮಂತ್ರಿ ಅವರ ಈ ಭರವಸೆಯಿಂದ ತೃಪ್ತಿ ಹೊಂದಿರುವ ಜಾರಂಗೆ ಅವರು ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ನೀರು ಸೇವಿಸಿದ್ದಾರೆ ಎಂದು ಸಿ.ಎಂ. ಕಚೇರಿ ತಿಳಿಸಿದೆ. 

ಅಸಮರ್ಪಕ ಮೀಸಲಾತಿಗೆ ಒಪ್ಪಿಗೆ ಇಲ್ಲ: ಜಾರಂಗೆ ಛತ್ರಪತಿ

ಸಂಭಾಜಿನಗರ (ಪಿಟಿಐ): ‘ಅಸಮರ್ಪಕವಾಗಿ ಮೀಸಲಾತಿ ಜಾರಿಗೊಳಿಸುವ ಸರ್ಕಾರದ ನಿಲುವನ್ನು ಮರಾಠ ಸಮುದಾಯವು ಒಪ್ಪಿಕೊಳ್ಳುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆದು ನಿರ್ಣಯ ಅಂಗೀಕರಿಸಬೇಕು’ ಎಂದು ಮನೋಜ್‌ ಜಾರಂಗೆ ಹೇಳಿದ್ದಾರೆ.

ಮೀಸಲಾತಿಗೆ ಒತ್ತಾಯಿಸಿ ಜಾಲ್ನಾ ಜಿಲ್ಲೆಯಲ್ಲಿರುವ ತನ್ನ ಹುಟ್ಟೂರು ಅಂತರವಾಲಿ ಸಾರ್ತಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಮ್ಮ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವು ಉಪ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಮಹಾರಾಷ್ಟ್ರದಲ್ಲಿರುವ ಇಡೀ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ‘ಸಮುದಾಯವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದೆ’ ಎಂದು ಹೇಳಿದರು.

ಕರ್ಫ್ಯೂ ಜಾರಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ

ಮೀಸಲಾತಿ ಹೋರಾಟವು ಹಿಂಸಾಚಾರಕ್ಕೆ ತಿರುಗಿರುವುದರಿಂದ ಮಹಾರಾಷ್ಟ್ರದ ಧಾರಶಿವ ಹಾಗೂ ಬೀಡ್‌ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಕರ್ಫ್ಯೂ ಜಾರಿಗೊಳಿಸಲಾಗಿದೆ.  ಧಾರಶಿವ ಜಿಲ್ಲೆಯ ಒಮೆರ್ಗಾ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿದೆ.

ಪುಣೆಯ ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು.

‘ಧಾರಶಿವ ಜಿಲ್ಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(2) ಅನ್ವಯ ಕರ್ಫ್ಯೂ ವಿಧಿಸಲಾಗಿದೆ. ಐದು ಜನರಿಗಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಚಿನ್ ಓಂಬಾಸೆ ತಿಳಿಸಿದ್ದಾರೆ.

49 ಮಂದಿ ಬಂಧನ: ಬೀಡ್‌ ಜಿಲ್ಲೆಯಲ್ಲಿ ಹಿಂಸಾ ಕೃತ್ಯದಲ್ಲಿ ತೊಡಗಿದ್ದ ಆರೋಪದ ಮೇರೆಗೆ 49 ಮಂದಿಯನ್ನು ಬಂಧಿಸಲಾಗಿದೆ. ರಾಜಕಾರಣಿಗಳ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನಕಾರರು ಹಿಂಸಾಚಾರಕ್ಕೆ ಇಳಿದಿದ್ದರು ಎಂದು ಹೇಳಲಾಗಿದೆ. ‘ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಬೀಡ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಕುಮಾರ್ ಠಾಕೂರ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸಂಘರ್ಷ ಉಲ್ಬಣಕ್ಕೆ ರಾಜ್ಯ ಸರ್ಕಾರದ ಸುಳ್ಳು ಭರವಸೆ ಹಾಗೂ ತಪ್ಪು ನಿರ್ಧಾರವೇ ಕಾರಣವಾಗಿದೆ. ಬಿಜೆಪಿ ಹಚ್ಚಿದ ಬೆಂಕಿಗೆ ರಾಜ್ಯದಲ್ಲಿ ಅಸ್ಥಿರತೆ ತಲೆದೋರಿದೆ
-ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ
ಮರಾಠ ಮೀಸಲು ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ತ್ವರಿತ ಪರಿಹಾರಕ್ಕಾಗಿ ಕೂಡಲೇ ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕು 
-ಉದ್ಧವ್‌ ಠಾಕ್ರೆ, ಅಧ್ಯಕ್ಷ ಶಿವಸೇನಾ (ಯುಬಿಟಿ)
ನಾನು ಯಾವುದೇ ಜನಪ್ರತಿನಿಧಿಗೂ ರಾಜೀನಾಮೆ ಸಲ್ಲಿಸುವಂತೆ ಹೇಳಿಲ್ಲ. ಅದು ಅವರ ಸ್ವಂತ ನಿರ್ಧಾರ. ಆದರೆ ಅವರ ನಿಲುವು ಮರಾಠರ ಆಶೋತ್ತರಗಳಿಗೆ ಪ್ರತಿಕೂಲವಾಗಬಾರದು
-ಮನೋಜ್‌ ಜಾರಂಗೆ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT