ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Quit India Day: ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಬಂಧನ, ಬಿಡುಗಡೆ

Published 9 ಆಗಸ್ಟ್ 2023, 6:21 IST
Last Updated 9 ಆಗಸ್ಟ್ 2023, 6:21 IST
ಅಕ್ಷರ ಗಾತ್ರ

ಮುಂಬೈ: ಭಾರತ ಬಿಟ್ಟು ತೊಲಗಿ ಚಳುವಳಿ (Quit India moment) ಸ್ಮರಣಾರ್ಥ ಇಲ್ಲಿನ ಕ್ರಾಂತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಷಾರ್‌ ಗಾಂಧಿ ಅವರನ್ನು ಸಾಂತಾ ಕ್ರೂಸ್ ಪೊಲೀಸರು ಬುಧವಾರ ಬಂಧಿಸಿ ಬಿಡುಗಡೆ ಮಾಡಿದ್ದಾರೆ

ಈ ಕುರಿತು ತುಷಾರ್ ಗಾಂಧಿ ಅವರೇ 'ಎಕ್ಸ್‌'ನಲ್ಲಿ (ಟ್ವಿಟರ್‌) ಮಾಹಿತಿ ಹಂಚಿಕೊಂಡಿದ್ದಾರೆ.

'ಭಾರತ ಬಿಟ್ಟು ತೊಲಗಿ ಚಳುವಳಿ ಸ್ಮರಣಾರ್ಥ ಆಗಸ್ಟ್‌ 9ರಂದು (ಇಂದು) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟ್ಟಿದ್ದ ನನ್ನನ್ನು, ಸ್ವತಂತ್ರ ಭಾರತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರು ಬಂಧಿಸಿದ್ದಾರೆ. ಐತಿಹಾಸಿಕ ದಿನದಂದು ನನ್ನ ಮುತ್ತಜ್ಜ–ಮುತ್ತಜ್ಜಿ, ಬಾಪು ಹಾಗೂ ಬಾ (ಮಹಾತ್ಮಾ ಗಾಂಧಿ ಮತ್ತು ಕಸ್ತೂರ ಬಾ) ಅವರೂ ಬ್ರಿಟೀಷರಿಂದ ಬಂಧನಕ್ಕೊಳಗಾಗಿದ್ದರು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಹೇಳಿದ್ದಾರೆ.

'ಠಾಣೆಯಿಂದ ತೆರಳಲು ಅನುಮತಿ ದೊರತ ತಕ್ಷಣವೇ ಕಾರ್ಯಕ್ರಮಕ್ಕೆ ತೆರಳುತ್ತೇನೆ. ಖಂಡಿತವಾಗಿಯೂ ಭಾರತ ಬಿಟ್ಟು ತೊಲಗಿ ಚಳವಳಿ ದಿನ ಮತ್ತು ಹುತಾತ್ಮರನ್ನು ಸ್ಮರಿಸುತ್ತೇನೆ' ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಹೋಗಲು ಈಗ ಅನುಮತಿ ಸಿಕ್ಕಿದೆ. ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದೇನೆ' ಎಂದಿದ್ದು, 'ಕ್ರಾಂತಿ ಅಮರವಾಗಲಿ' (ಇನ್‌ಕ್ವಿಲಾಬ್‌ ಜಿಂದಾಬಾದ್) ಎಂದು ಬರೆದುಕೊಂಡಿದ್ದಾರೆ.

'ಈ ಭ್ರಷ್ಟ ಸರ್ಕಾರ ನಮ್ಮ ಶಾಂತಿ ಮತ್ತು ಅಹಿಂಸೆಗೆ ಬೆದರುತ್ತಿರುವುದೇಕೆ?' ಎನ್ನುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. 

ತುಷಾರ್ ಗಾಂಧಿ ಅವರ ಬಂಧನಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ದ್ವೇಷ ಭಾರತ ಬಿಟ್ಟು ತೊಲಗಲಿ
ಪೊಲೀಸ್ ಠಾಣೆಯಿಂದ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿ ದೇಶದ ತುಂಬಾ ಭಯ, ಆತಂಕ ಆವರಿಸಿದೆ ಎಂದು ತುಷಾರ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಯಿಂದ ಆಟೊ ರಿಕ್ಷಾದಲ್ಲಿ ಹೊರಟೆ. ಬಾಂದ್ರಾ ತಲುಪಿದ ಬಳಿಕ ಅಲ್ಲಿಂದ ಕ್ರಾಂತಿ ಮೈದಾನಕ್ಕೆ ಹೋಗಲು ಅಲ್ಲೇ ಇದ್ದ ವಯಸ್ಸಾದ ಮುಸ್ಲಿಂ ಟ್ಯಾಕ್ಸಿ ಡ್ರೈವರ್‌ ಒಬ್ಬರನ್ನು ಕರೆದೆ. ಪೊಲೀಸ್‌ ವಾಹನವನ್ನು ನೋಡಿದ ಅವರು, 'ಸರ್, ನನ್ನನ್ನು ಇದರಲ್ಲಿ ಸಿಕ್ಕಿಸಬೇಡಿ' ಎಂದು ಆತಂಕದಿಂದ ಹೇಳಿದರು. ಅವರ ಮನವೊಲಿಸಿ ಧೈರ್ಯ ತುಂಬಲು ಸಾಕಷ್ಟು ಪ್ರಯತ್ನಿಸಿದೆ. ಗಂಭೀರವಾದ ಈ ಸಮಸ್ಯೆ (ಭಯ) ಇಂದು ಸಮಾಜವನ್ನು ಆವರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ದ್ವೇಷವು ಭಾರತ ಬಿಟ್ಟು ತೊಲಗಲಿ, ಪ್ರೀತಿ ಹೃದಯಗಳನ್ನು ಬೆಸೆಯಲಿ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT