ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ | ರಾಹುಲ್‌, ತುಷಾರ್‌ ‘ಐತಿಹಾಸಿಕ’ ನಡಿಗೆ: ಕಾಂಗ್ರೆಸ್‌

Last Updated 18 ನವೆಂಬರ್ 2022, 15:33 IST
ಅಕ್ಷರ ಗಾತ್ರ

ಶೆಗಾಂವ್‌ (ಮಹಾರಾಷ್ಟ್ರ): ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ, ವಿಚಾರವಾದಿ ತುಷಾರ್‌ ಗಾಂಧಿ ಅವರು ಶುಕ್ರವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಇಲ್ಲಿ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ಹೆಜ್ಜೆ ಹಾಕಿದರು. ಇಬ್ಬರ ಈ ನಡಿಗೆಯನ್ನು ‘ಐತಿಹಾಸಿಕ’ ಎಂದುಕಾಂಗ್ರೆಸ್‌ ಬಣ್ಣಿಸಿದೆ.

‘ಜವಾಹರಲಾಲ್‌ ನೆಹರೂ ಅವರ ಮರಿ ಮೊಮ್ಮಗ ಹಾಗೂ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ಭಾರತವನ್ನು ಒಗ್ಗೂಡಿಸುವ ಈ ನಡಿಗೆಯಲ್ಲಿ ಪಾಲ್ಗೊಂಡಿದ್ದು, ಇಬ್ಬರೂ ಹಿರಿಯ ನಾಯಕರ ಪರಂಪರೆಯ ಮುಂದುವರಿಸಿದ್ದಾರೆ’ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.

‘ಆಡಳಿತಾರೂಢರು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಬಹುದೇ ಹೊರೆತು ದಮನ ಮಾಡಲು ಸಾಧ್ಯವಿಲ್ಲ ಎಂದು ಈ ಇಬ್ಬರ ನಡಿಗೆಯು ಸಾರಿದೆ’ ಎಂದು ಕಾಂಗ್ರೆಸ್‌ ಹೇಳಿದೆ.

ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ತುಷಾರ್‌ ಗಾಂಧಿ ಅವರು ಗುರುವಾರ ಟ್ವೀಟ್‌ ಮಾಡಿದ್ದರು. ‘ಶೆಗಾಂವ್‌ ನನ್ನ ಹುಟ್ಟೂರಾಗಿದೆ. ಆದ್ದರಿಂದ ನಾನು ಭಾರತ್‌ ಜೋಡೊ ಯಾತ್ರೆಯಲ್ಲಿ ಈ ಊರಿನಿಂದಲೇ ಪಾಲ್ಗೊಳ್ಳುವೆ’ ಎಂದಿದ್ದರು. ನೆಹರೂ ಹಾಗೂ ಮಹಾತ್ಮ ಗಾಂಧಿ ಅವರಿಬ್ಬರೂ ಒಟ್ಟಿಗಿದ್ದ ಫೋಟೊವನ್ನೂ ತುಷಾರ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಕಾರ್ಗಿಲ್‌ ಯುದ್ಧದ ಹೀರೊ ಎಂದೇ ಖ್ಯಾತರಾಗಿರುವ ನಾಯಕ್‌ ದೀಪ್‌ಚಂದ್‌ ಮತ್ತು ಬಾಲಿವುಡ್‌ ನಟಿ ಮೋನಾ ಅಂಬೇಗಾವ್ಕರ್‌ ಅವರು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಅವರ ಜೊತೆ ಯಾತ್ರೆಯಲ್ಲಿ ಪಾಲ್ಗೊಂಡರು.

ಮಹಿಳೆಯರ ಹೆಜ್ಜೆ: ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಶನಿವಾರ (ನ.19) ರಾಹುಲ್‌ ಗಾಂಧಿ ಅವರೊಂದಿಗೆ ಕೇವಲ ಮಹಿಳೆಯರು ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಮಾಹಿತಿ ನೀಡಿದ್ದಾರೆ.

‘ಪಕ್ಷದ ಶಾಸಕಿಯರು, ಮಹಿಳಾ ಸಂಸದರು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳ ಕಾಂಗ್ರಸ್‌ನ ಮಹಿಳಾ ಸದಸ್ಯರು, ಮಹಿಳಾ ಕಾರ್ಯಕರ್ತೆಯರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಮಹಾರಾಷ್ಟ್ರದಲ್ಲಿ ಮುಕ್ತಾಯಗೊಂಡ ಯಾತ್ರೆ
ಹಾರಾಷ್ಟ್ರದಲ್ಲಿ 12 ದಿನಗಳ ‘ಭಾರತ್‌ ಜೋಡೊ ಯಾತ್ರೆ’ಯು ಪೂರ್ಣಗೊಂಡಿದೆ. ಈ ವೇಳೆ ಬುಲ್ದಾನ ಜಿಲ್ಲೆಯ ಶೆಗಾಂವ್‌ನಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

‘ತಮ್ಮ ಬೆಳೆಗೆ ಉತ್ತಮ ಬೆಲೆ ಸಿಗದೆ, ಬೆಲೆ ವಿಮೆ ಸೌಲಭ್ಯ ಇಲ್ಲದೆ ಮಹಾರಾಷ್ಟ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಹೇಳಿದರು.

‘ಪ್ರಧಾನಿ ಮೋದಿ ಮತ್ತು ಇಲ್ಲಿನ ಮುಖ್ಯಮಂತ್ರಿ, ಜನರ ಕಷ್ಟಗಳನ್ನು ಪ್ರೀತಿಯಿಂದ ಕೇಳಿದರೆ, ಯಾವ ರೈತನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT