ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ನೆಲಕ್ಕೆ ಬಡಿದು ನಾಯಿಮರಿ ಬರ್ಬರ ಹತ್ಯೆ– ಕ್ರಮದ ಭರವಸೆ ನೀಡಿದ ಸಿಎಂ

Published 10 ಡಿಸೆಂಬರ್ 2023, 9:45 IST
Last Updated 10 ಡಿಸೆಂಬರ್ 2023, 9:45 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ನಾಯಿಮರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದನ್ನು ಅನಾಗರಿಕ ಕೃತ್ಯ ಎಂದು ಖಂಡಿಸಿದ್ದಾರೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಬಗ್ಗೆ ಸಿಎಂ ಚೌಹಾಣ್ ಅವರ ಗಮನ ಸೆಳೆದಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿದ್ದರು.

ಘಟನೆ ಶನಿವಾರ ನಡೆದಿದ್ದು, ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ನಾಯಿಮರಿಯನ್ನು ನೆಲಕ್ಕೆ ಬಡಿದು, ತುಳಿದು ಸಾಯಿಸುತ್ತಿರುವುದು ಕಂಡುಬಂದಿದೆ.

‘ಇದು ಭಯಾನಕ ಮತ್ತು ವಿಚಲಿತಗೊಳಿಸುವ ಸಂಗತಿಯಾಗಿದೆ. ಈ ಅನಾಗರಿಕ ಕೃತ್ಯ ಎಸಗಿದವನಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಶಿವರಾಜ್ ಚೌಹಾಣ್‌ ಜೀ, ದಯವಿಟ್ಟು ಈ ಬಗ್ಗೆ ಗಮನ ಹರಿಸಿ’ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಚೌಹಾಣ್, ‘ಈ ಭಯಾನಕ ಘಟನೆಯಿಂದ ಬಹಳ ವಿಚಲಿತನಾಗಿದ್ದೇನೆ. ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ಅನಾಗರಿಕ ಕೃತ್ಯಗಳನ್ನು ನಾವು ನಿಸ್ಸಂದೇಹವಾಗಿ ಖಂಡಿಸುತ್ತೇವೆ. ತಪ್ಪಿತಸ್ಥ ವ್ಯಕ್ತಿ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದರು.

ಶನಿವಾರ ಸಂಜೆ ಸುಭಾಷ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ಗುನಾ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನೂಪ್ ಭಾರ್ಗವ ಪಿಟಿಐಗೆ ತಿಳಿಸಿದ್ದಾರೆ.

30 ವರ್ಷದ ಆರೋಪಿ ಮೃತ್ಯುಂಜಯ್ ಜದೌನ್‌ನನ್ನು ಭಾನುವಾರ ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 428 (ಯಾವುದೇ ಪ್ರಾಣಿಯನ್ನು ಕೊಲ್ಲುವುದು, ವಿಷ ಹಾಕುವುದು, ಅಂಗವಿಕಲಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಮಾನಸಿಕ ಆರೋಗ್ಯದ ಬಗ್ಗೆ ಕೇಳಿದಾಗ, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT