ಇಂಫಾಲ: ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಬ್ರಾಂಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಗಳ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಮಣಿಪುರ ಸರ್ಕಾರವು ಶುಕ್ರವಾರ ಷರತ್ತುಬದ್ಧವಾಗಿ ತೆರವುಗೊಳಿಸಿದೆ.
ರಾಜ್ಯ ಸರ್ಕಾರವು ಷರತ್ತುಬದ್ಧವಾಗಿ ಬ್ರಾಡ್‌ಬ್ಯಾಂಡ್ ಸೇವೆಗಳ (ಐಎಲ್‌ಎಲ್, ಎಫ್‌ಟಿಟಿಐಎಚ್) ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆಯುಕ್ತ (ಗೃಹ ಇಲಾಖೆ) ಎನ್. ಅಶೋಕ್ ಕುಮಾರ್ ತಿಳಿಸಿದ್ದಾರೆ.
ಹಾಗಿದ್ದರೂ ಮೊಬೈಲ್ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಪ್ಪು ಮಾಹಿತಿ, ವದಂತಿ ಹರಡುವ ಮತ್ತು ದಂಗೆ ಎಬ್ಬಿಸಲು ಪ್ರಚೋದನೆ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಮಣಿಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಸೆಪ್ಟೆಂಬರ್ 10ರಂದು ಎಲ್ಲ ರೀತಿಯ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಡಿಜಿಪಿ ಮತ್ತು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರನ್ನು ಪದಚ್ಯುತಗೊಳಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಪ್ರತಿಭಟನೆ ಹಿಂಸೆಗೆ ತಿರುಗಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಲವೆಡೆ ಕರ್ಫ್ಯೂ ಹೇರಲಾಗಿತ್ತು.