ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಎಸ್‌ಟಿ ಪಟ್ಟಿಯಿಂದ ಮೈತೇಯಿ ಕೈಬಿಟ್ಟ ಹೈಕೋರ್ಟ್

Published 23 ಫೆಬ್ರುವರಿ 2024, 1:03 IST
Last Updated 23 ಫೆಬ್ರುವರಿ 2024, 1:03 IST
ಅಕ್ಷರ ಗಾತ್ರ

ಇಂಫಾಲ್ : ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದ ತನ್ನ ಮಾರ್ಚ್ 2023ರ ಆದೇಶದಲ್ಲಿನ ಒಂದು ಪ್ಯಾರಾ ತೆಗೆದುಹಾಕುವಂತೆ ಅಲ್ಲಿನ ಹೈಕೋರ್ಟ್ ಮಣಿಪುರ ಸರ್ಕಾರಕ್ಕೆ ಆದೇಶ ನೀಡಿದೆ. ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಕುರಿತ ಆ ಪ್ಯಾರಾ ಸುಪ್ರೀಂ ಕೋರ್ಟ್‌ ನಿಲುವಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿ ಗೋಲ್ಮೇಯೀ ಗೈಫುಲ್‌ಶಿಲು ಅವರ ಏಕಸದಸ್ಯ ಪೀಠವು ಮೇಲ್ಮನವಿ ವಿಚಾರಣೆಯ ವೇಳೆ ಹೈಕೋರ್ಟ್‌ನ ಹಿಂದಿನ ನಿರ್ದೇಶನವನ್ನು ರದ್ದುಗೊಳಿಸಿತು.   

ಭಾರತ ಸರ್ಕಾರದ ಪರಿಶಿಷ್ಟ ಪಂಗಡ ಪಟ್ಟಿ ತಿದ್ದುಪಡಿಯ ನಿಗದಿತ ಪ್ರಕ್ರಿಯೆಯನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಗೋಲ್ಮೇಯೀ ಗೈಫುಲ್‌ಶಿಲು ಅವರ ಫೆಬ್ರುವರಿ 21ರ ಆದೇಶವು, ಹೈಕೋರ್ಟ್‌ನ ಹಿಂದಿನ ನಿರ್ದೇಶನವನ್ನು ರದ್ದುಪಡಿಸುವುದರ ಅಗತ್ಯವನ್ನು ಒತ್ತಿಹೇಳಿದೆ. 

2000ನೇ ಇಸವಿಯ ಸಾಂವಿಧಾನಿಕ ಪೀಠವು ಪರಿಶಿಷ್ಟ ಪಂಗಡದ ವರ್ಗೀಕರಣದಲ್ಲಿ ನ್ಯಾಯಾಂಗದ ಮಧ್ಯಪ್ರವೇಶದ ಸಂಬಂಧ ಇರುವ ಶಾಸನಾತ್ಮಕ ಮಿತಿಗಳನ್ನು ವಿವರಿಸಿತ್ತು. ಮಣಿಪುರದ ಹೈಕೋರ್ಟ್, ತನ್ನ ವಿವರವಾದ 19 ಪುಟಗಳ ತೀರ್ಪಿನಲ್ಲಿ ಅದನ್ನು ಪ್ರಸ್ತಾಪಿಸಿದೆ.

ಹೈಕೋರ್ಟ್ ಮಾರ್ಚ್ 27, 2023ರಂದು ಮೈತೇಯಿಗಳಿಗೆ ಎಸ್‌ಟಿ ಪಟ್ಟಿಗೆ ಸೇರಿಸುವ ಕುರಿತು ನಿರ್ದೇಶನ ನೀಡಿದ ನಂತರ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.  

ಹೈಕೋರ್ಟ್ ಕಳೆದ ವರ್ಷದ ಆದೇಶದಲ್ಲಿ ‘ಮೀತೀ/ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧದ ಮನವಿಯನ್ನು ರಾಜ್ಯ ಸರ್ಕಾರವು ಆದಷ್ಟು ಶೀಘ್ರವಾಗಿ, ನಾಲ್ಕು ವಾರಗಳ ಒಳಗೆ ಆದ್ಯತೆಯ ಮೇರೆಗೆ ಪರಿಗಣಿಸಬೇಕು’ ಎಂದು ನಿರ್ದೇಶಿಸಿತ್ತು. 

ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ವಿಷಯದಿಂದ ಮಣಿಪುರದಲ್ಲಿ ಆರಂಭವಾದ ಹಿಂಸಾಚಾರವು ರಾಜ್ಯದ ಜನಸಮುದಾಯಗಳ ನಡುವೆ ಸಂಕೀರ್ಣ ಮತ್ತು ಹಿಂಸಾತ್ಮಕ ಪರಿಣಾಮಗಳಿಗೆ ಎಡೆಮಾಡಿಕೊಟ್ಟಿತು.

ಹೈಕೋರ್ಟ್ ತೀರ್ಪು ಸರಿಯಿಲ್ಲ ಎಂದಿದ್ದ ‘ಸುಪ್ರೀಂ’ 

ಮಾರ್ಚ್ 27ರ ನಂತರ ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿ ಸರಣಿ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು. 2023ರ ಮೇ 17ರಂದು ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೈಕೋರ್ಟ್ ನಿರ್ದೇಶನ ‘ಜಿಗುಪ್ಸೆಯಿಂದ ಕೂಡಿದೆ’ ಎಂದು ಖಂಡಿಸಿ ಅದರ ಅಸಮರ್ಪಕ ಗ್ರಹಿಕೆಗಳಿಗಾಗಿ ತೀರ್ಪಿಗೆ ತಡೆಯಾಜ್ಞೆ ನೀಡಲು ಪರಿಗಣಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ‘ಹೈಕೋರ್ಟ್ ಆದೇಶ ಸರಿಯಲ್ಲ. ಅದರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ನಮಗೆ ಅನ್ನಿಸುತ್ತಿದೆ. ಹೈಕೋರ್ಟ್ ಆದೇಶವು ಸಂಪೂರ್ಣ ತಪ್ಪು’ ಎಂದು ಅಭಿಪ್ರಾಯ ಪಟ್ಟಿತ್ತು. ಬಹುಸಂಖ್ಯಾತ ಮೈತೇಯಿಗಳಿಗೆ ಮೀಸಲಾತಿ ಕಲ್ಪಿಸುವ ಮಣಿಪುರ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಹಲವು ಅರ್ಜಿಗಳು ವಿಸ್ತೃತ ವಿಭಾಗೀಯ ಪೀಠದ ಮುಂದೆ ಬಾಕಿಯಿವೆ. ಹಾಗಾಗಿ ಹೈಕೋರ್ಟ್ ತೀರ್ಮಾನದಿಂದ ಉಂಟಾಗುವ ಯಾವುದೇ ಕಾನೂನಾತ್ಮಕ ಸಮಸ್ಯೆಗಳ ವಿಚಾರಣೆಯನ್ನು ತಾನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT