ನವದೆಹಲಿ: ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಜನರ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಕಣಿವೆ ರಾಜ್ಯದ ಸ್ಥಿತಿಗತಿ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಮುಂದುವರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು, ‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ. ಆದರೂ, ನಾಗರಿಕರು ಸೇರಿದಂತೆ ಖಾಸಗಿ ಮತ್ತು ಸಾರ್ವಜನಿಕ ಸ್ವತ್ತುಗಳ ರಕ್ಷಣೆಗೆ ಸರ್ಕಾರಗಳು ಸೂಕ್ತ ಭದ್ರತೆಕೈಗೊಳ್ಳಬೇಕು’ ಎಂದು ಸೂಚಿಸಿತು.
‘ರಾಜಕೀಯ ಪಕ್ಷಗಳ ನಾಯಕರು ಹೇಳಿಕೆ ಬಿಡುಗಡೆ ಮತ್ತು ಮಾತನಾಡುವ ವೇಳೆ ಜಾಗರೂಕತೆವಹಿಸಬೇಕು. ಜನರ ನಡುವೆ ದ್ವೇಷ ಬಿತ್ತುವ ಕೆಲಸಕ್ಕೆ ಮುಂದಾಗಬಾರದು’ ಎಂದು ಎಚ್ಚರಿಕೆ ನೀಡಿತು.
ಸಂಘರ್ಷ ಪೀಡಿತ ನೆಲದಲ್ಲಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಸೇನೆ ಮತ್ತು ಸಂಸತ್‌ಗೆ ನಿರ್ದೇಶನ ನೀಡುವಂತೆ ಮಣಿಪುರ ಬುಡಕಟ್ಟು ವೇದಿಕೆ ಪರ ಹಾಜರಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಸಂಘರ್ಷ ಹೆಚ್ಚಿರುವ ಬುಡಕಟ್ಟು ಪ್ರದೇಶಗಳಲ್ಲಿ ಭದ್ರತೆಗೆ ಯೋಧರನ್ನು ನಿಯೋಜಿಸುವಂತೆ ಸೇನೆ ಮತ್ತು ಅರೆಸೇನಾ ಪಡೆಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ತುಂಬಾ ಅಪಾಯಕಾರಿ ಆಗಲಿದೆ. ಜನರ ರಕ್ಷಣೆಯೇ ಸೇನೆಯ ಗುರಿಯಾಗಿದೆ. ದೇಶ ಸ್ವಾತಂತ್ರ್ಯಗೊಂಡ ದಿನದಿಂದಲೂ ಅಚ್ಚುಕಟ್ಟಾಗಿ ಈ ಕರ್ತವ್ಯವನ್ನು ನಿರ್ವಹಿಸುತ್ತಿದೆ’ ಎಂದು ಹೇಳಿತು.
‘ದೇಶದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್, ಭಾರತೀಯ ಸೇನೆಗೆ ನಿರ್ದೇಶನ ನೀಡಿದ ನಿದರ್ಶನವಿಲ್ಲ. ಅದನ್ನು ನಾವು ಈಗ ಉಲ್ಲಂಘಿಸುವುದಿಲ್ಲ’ ಎಂದು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.
ಧ್ವಂಸಗೊಂಡಿರುವ ಹಳ್ಳಿಗಳು, ದೇವಾಲಯಗಳು, ಪ್ರಾರ್ಥನಾ ಮಂದಿರಗಳ ಮರು ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಬೇಕು ಎಂದು ಸೂಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.