ನವದೆಹಲಿ: ಮಣಿಪುರದಲ್ಲಿ ಮಹಿಳೆಯರ ಮೇಲಿನ ಗಂಭೀರ ಸ್ವರೂಪದ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಇತರ ಸಮುದಾಯ ತಮ್ಮ ಅಧೀನದಲ್ಲಿದೆ ಎಂಬ ಸಂದೇಶ ಸಾರಲು ಗುಂಪುಗಳು ಲೈಂಗಿಕ ಹಿಂಸಾಚಾರವನ್ನು ಬಳಸುತ್ತವೆ ಮತ್ತು ಇದನ್ನು ತಡೆಯಲು ರಾಜ್ಯ ಬದ್ಧವಾಗಿರುತ್ತದೆ ಎಂದು ಹೇಳಿದೆ.
ಮಣಿಪುರದಲ್ಲಿ ಮೇ 4ರಿಂದ ಮಹಿಳೆಯರ ವಿರುದ್ಧ ನಡೆದಿರುವ ದೌರ್ಜನ್ಯದ ಸ್ವರೂಪದ ಬಗ್ಗೆ ತನಿಖೆ ನಡೆಸುವಂತೆಯೂ ನಿವೃತ್ತ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿಗೆ ಸೂಚಿಸಿದೆ. ಈಚೆಗಷ್ಟೆ ಸುಪ್ರೀಂಕೋರ್ಟ್ ಈ ಸಮಿತಿ ರಚಿಸಿದೆ.
ಮಹಿಳೆಯರನ್ನು ಲೈಂಗಿಕ ಅಪರಾಧಗಳು ಮತ್ತು ಹಿಂಸಾಚಾರಕ್ಕೆ ಒಳಪಡಿಸುವುದು ಸ್ವೀಕಾರಾರ್ಹವಲ್ಲ. ಇದು ಘನತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಸಾಂವಿಧಾನಿಕ ಮೌಲ್ಯಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಕೃತ್ಯಕ್ಕೆ ಬಲಿಯಾದವರ ಅಥವಾ ಸಂತ್ರಸ್ತರ ಸಮುದಾಯ ತಮ್ಮ ಅಧೀನದಲ್ಲಿದೆ ಎಂಬ ಸಂದೇಶ ಸಾರುವುದು ಕೃತ್ಯ ಎಸಗಿದ ಗುಂಪಿನ ಉದ್ದೇಶವಾಗಿರುತ್ತದೆ.
ದೊಡ್ಡ ಗುಂಪಿನ ಸದಸ್ಯರಾಗಿದ್ದರೆ ತಮ್ಮ ಅಪರಾಧಗಳಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ವಾಸ್ತಾವಂಶ ಸೇರಿದಂತೆ ಅನೇಕ ಕಾರಣಗಳಿಗೆ ಗುಂಪುಗಳು ಮಹಿಳೆಯರ ಮೇಲೆ ಸಾಮಾನ್ಯವಾಗಿ ದೌರ್ಜನ್ಯ ನಡೆಸುತ್ತವೆ.
ಸಂಘರ್ಷ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ಆಂತರಿಕ ಹಿಂಸಾಚಾರವು ದೌರ್ಜನ್ಯವಲ್ಲದೆ ಬೇರೇನೂ ಅಲ್ಲ. ಜನರು ಇಂತಹ ಹಿಂಸಾಚಾರ ಮಾಡದಂತೆ ತಡೆಯುವುದು ಹಾಗೂ ಹಿಂಸಾಚಾರಕ್ಕೆ ಗುರಿಯಾಗುವವರನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠ ಆ. 7 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಈ ಆದೇಶವನ್ನು ವೆಬ್‌ಸೈಟ್‌ನಲ್ಲಿ ಗುರುವಾರ ರಾತ್ರಿ ಅಪ್‌ಲೋಡ್ ಮಾಡಲಾಗಿದೆ.
ತನಿಖೆ ಪೂರ್ಣಗೊಳ್ಳಲು ಅಗತ್ಯವಿರುವ ಕಾರಣ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವುದು ಪೊಲೀಸರ ಕರ್ತವ್ಯ. ಅಲ್ಲದೇ ಆರೋಪಿಗಳು ಸಾಕ್ಷ್ಯಗಳನ್ನು ತಿರುಚಲು ಅಥವಾ ನಾಶಪಡಿಸಲು, ಸಾಕ್ಷಿಗಳನ್ನು ಬೆದರಿಸಲು ಮತ್ತು ಅಪರಾಧದ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಬಹುದು. ಯಾವುದೇ ಕಾರಣವಿಲ್ಲದೆ ಆರೋಪಿಗಳನ್ನು ಗುರುತಿಸುವಲ್ಲಿ ಮತ್ತು ಬಂಧಿಸುವಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಕೋರ್ಟ್ ಎಚ್ಚರಿಸಿದೆ.
ಸಂತ್ರಸ್ತರು ತಮ್ಮ ಸಮುದಾಯ ಲೆಕ್ಕಿಸದೆ ಪರಿಹಾರ ಕ್ರಮಗಳನ್ನು ಪಡೆಯಬೇಕು. ಸಾಂವಿಧಾನಿಕ ಮತ್ತು ಅಧಿಕೃತ ಕರ್ತವ್ಯಗಳನ್ನು ನಿರ್ಲಕ್ಷಿಸುವುದು ಮಾತ್ರವಲ್ಲದೆ ಅಪರಾಧಿಗಳೊಂದಿಗೆ ಶಾಮೀಲಾಗಿರುವ ರಾಜ್ಯದ ಪ್ರತಿಯೊಬ್ಬ ಅಧಿಕಾರಿ ಅಥವಾ ಉದ್ಯೋಗಿಯನ್ನು ತಪ್ಪದೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವೆ ಉಂಟಾದ ಸಂಘರ್ಷದಿಂದಾಗಿ ಸುಮಾರು 160ಕ್ಕೂ ಹೆಚ್ಚು ಜನರ ಹತ್ಯೆ ಆಗಿದೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.